ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕ ಮತ್ತು ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ಸುಪ್ರಜ ಗುರುಕುಲ ಶಾಲೆಯಲ್ಲಿ ಅಂತರ್ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಕರ್ನಾಟಕ ಮತ್ತು ಕನ್ನಡ ಭಾಷೆಸಾಹಿತ್ಯ, ಸಂಸ್ಕೃತಿ ನಾಡು ನುಡಿಗಳ ಬಗ್ಗೆ ಅರಿವು ಅದೆ ರೀತಿಯಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಂಸ್ಕೃತಿಯ ಬಗ್ಗೆಯೂ ತಿಳಿದುಕೊಳ್ಳಲು ಪೂರಕವಾಗುತ್ತದೆ ಎಂದರು.
ಜಾನಪದ ಪರಿಷತ್ ಸದಸ್ಯ ಮತ್ತು ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್.ಹರೀಶ್ ಮಾತನಾಡಿ-ಆಧುನಿಕತೆ ವೈಜ್ಞಾನಿಕ ಭರಾಟೆಯಲ್ಲಿ ಇಂದು ಜಾನಪದ ಸೊಗಡು ಮರೆಯಾಗುತ್ತಿದೆ, ಗಿಡಮರ ಗದ್ದೆಸಾಲು ಹಳ್ಳಿಯ ಪ್ರತೀಕವಾಗಿದ್ದು ಈ ಮೂಲಕವಾಗಿ ಜಾನಪದ ಸೊಗಡು ಹಳ್ಳಿಯ ಕೊಡುಗೆಯಾಗಿದೆ ಎಂದರು.ಜಾನಪದ ಪರಿಷತ್ ಘಟಕದ ಅಧ್ಯಕ್ಷೆ ಮತ್ತು ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ.ಸುಜಲಾದೇವಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ-ಕನ್ನಡ ಭಾಷೆ ನಾಡುನುಡಿಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ಅಂತರ್ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಘಟಕದ ಉಪಾಧ್ಯಕ್ಷ ದಿನೇಶ್ ಮಾಲಂಬಿ, ಜಾನಪದ ಪರಿಷತ್ ಸದಸ್ಯ ಭಾಸ್ಕರ್ ಮುಳ್ಳೂರು, ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲಾ ಶಿಕ್ಷಕ ರಂಗಸ್ವಾಮಿ, ಕೊಡ್ಲಿಪೇಟೆ ಕಲ್ಲುಮಠ ಎಸ್.ಎಸ್.ಕೆ ವಿದ್ಯಾಸಂಸ್ಥೆ ಶಿಕ್ಷಕಿ ಶಾಲಿನಿ ಮುಂತಾದವರು ಹಾಜರಿದ್ದರು.ಕನ್ನಡ ರಸಪ್ರಶ್ನೆ ವಿಜೇತ ತಂಡ: ಪ್ರೌಢಶಾಲಾ ವಿಭಾಗ:-ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ತಂಡ[ಪ್ರಥಮ], ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲಾ ತಂಡ[ದ್ವಿತೀಯ], ಕೊಡ್ಲಿಪೇಟೆ ಕಲ್ಲುಮಠ ಎಸ್‍ಎಸ್‍ಕೆ ಪ್ರೌಢಶಾಲಾ ತಂಡ[ತೃತೀಯ] ಸ್ಥಾನ ಪಡೆದುಕೊಂಡರು
ಪ್ರಾಥಮಿಕ ಶಾಲಾ ವಿಭಾಗ: ಸುಪ್ರಜ ಗುರುಕುಲ ಪ್ರಾಥಮಿಕ ಶಾಲಾ ತಂಡ[ಪ್ರಥಮ] ಹಾಗೂ ಕೊಡ್ಲಿಪೇಟೆ ಕಲ್ಲುಮಠ ಎಸ್‍ಎಸ್‍ಕೆ ಪ್ರಾಥಮಿಕ ಶಾಲಾ ತಂಡ[ದ್ವಿತೀಯ] ಸ್ಥಾನ ಪಡೆದುಕೊಂಡರು, ಸ್ಪರ್ಧಾ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.