ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪುಕಾಪು ತಹಸೀಲ್ದಾರ್ ಕಚೇರಿಯಲ್ಲಿ ಜನವರಿಯಲ್ಲಿ ನಡೆದ ಕಾಪು ತಾಲೂಕು ಪರಿಶಿಷ್ಟ ಜಾತಿ - ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಬಡಾ ಗ್ರಾಮದ ಕೊರಗ ಸಮುದಾಯದ ಪದವೀಧರ ಯುವತಿ ಸುಪ್ರೀತಾ ಎಂಬವರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಹತ್ತಾರು ವರ್ಷಗಳಿಂದ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ತಮ್ಮ ಮನೆಗಿನ್ನೂ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಇಲ್ಲ ಎಂದು ಅಳಲು ತೋಡಿಕೊಂಡಿದ್ದರು.ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದ ತಹಸೀಲ್ದಾರ್ ಆರ್. ಪ್ರತಿಭಾ, ಸಭೆ ಮುಗಿದ ತಕ್ಷಣ ಸುಪ್ರಿತಾ ಅವರ ಮನೆಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಪರಿಶೀಲಿಸಿದ್ದರು.ನಂತರ ಎರಡೇ ದಿನಕ್ಕೆ ಸುಪ್ರಿತಾ ಅವರ ಮನೆಯ ಮುಂದೆ ನಳ್ಳಿ ಹಾಕಿಸಿ ನೀರಿನ ಸಂಪರ್ಕವನ್ನೂ ಕಲ್ಪಿಸಲಾಯಿತು. ಮೂರೇ ದಿನಕ್ಕೆ ಮನೆಯ ಮುಂದೆ ಬೀದಿ ದೀಪ ಬಂದು ಬೆಳಕು ಚೆಲ್ಲಿತು. ಶೌಚಾಲಯಕ್ಕೂ ನೀರಿನ ವ್ಯವಸ್ಥೆ ಮಾಡಲಾಯಿತು.ಆದರೆ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಕೆಲವು ತಾಂತ್ರಿಕ ತೊಡಕುಗಳಿದ್ದವು. ಮುಂದಿನ ಒಂದು ವಾರದಲ್ಲಿ ಅವುಗಳನ್ನೂ ನಿವಾರಿಸಿ ಇದೀಗ ಸುಪ್ರಿತಾ ಮನೆಗೆ ವಿದ್ಯುತ್ ಕೂಡ ಬಂದಿದೆ.ಸ್ವತಃ ತಹಸೀಲ್ದಾರ್ ಅವರು ಮತ್ತೊಮ್ಮೆ ಸುಪ್ರೀತಾ ಮನೆಗೆ ತೆರಳಿ ವಿದ್ಯುತ್ ದೀಪ ಬೆಳಗಿಸಿ ಶುಭ ಹಾರೈಸಿದ್ದಾರೆ. ಅಂದು ಸಭೆಯಲ್ಲಿ ಕಣ್ಣೀರಿಟ್ಟಿದ್ದ ಸುಪ್ರೀತಾ ಮತ್ತವರ ಮನೆಯವರ ಮುಖದಲ್ಲಿ ನಗು ಚಿಮ್ಮುವಂತೆ ಮಾಡಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಪ್ರೀತಾ, ಈ ಹಿಂದೆ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಕುಟುಂಬಕ್ಕೆ ಅಗತ್ಯಗತ್ಯವಾಗಿದ್ದ ಈ ಮೂಲ ಸೌಕರ್ಯ ಒದಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತಹಸೀಲ್ದಾರ್ ಅವರು ಇದೀಗ ಖುದ್ದು ನಿಂತು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.ಪರಿಶಿಷ್ಟ ಜಾತಿ, ಪಂಗಡದವರು ಮತ್ತು ಹಿಂದುಳಿದವರಿಗೆ ಅಗತ್ಯ ಸೌಲಭ್ಯಗಳು ಸಿಕ್ಕಿ ಅವರು ಸಂತೋಷವಾಗಿದ್ದರೆ ಮಾತ್ರ ಸಮಾಜ ಸಂತೋಷವಾಗಿರುವುದು ಸಾಧ್ಯ. ಈ ಹಿನ್ನೆಲೆಯಲ್ಲಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ತಹಸೀಲ್ದಾರ್ ಪ್ರತಿಭಾ ಪ್ರತಿಕ್ರಿಯಿಸಿದ್ದಾರೆ.