ವೀರಲೋಕ ಬುಕ್ಸ್‌: ಓದುಗರಿಗೆ ಪುಸ್ತಕಗಳನ್ನು ಹತ್ತಿರಗೊಳಿಸುವ ವಿನೂತನ ಚಿಂತನೆ

| Published : Feb 26 2024, 01:32 AM IST

ವೀರಲೋಕ ಬುಕ್ಸ್‌: ಓದುಗರಿಗೆ ಪುಸ್ತಕಗಳನ್ನು ಹತ್ತಿರಗೊಳಿಸುವ ವಿನೂತನ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಂತೆ ಬೀದರ್‌ನಲ್ಲಿಯೂ ಸ್ವಯಂಕೃಷಿ ಯೋಜನೆ ಪ್ರಾರಂಭ, ಮಕ್ಕಳೂ ಪುಸ್ತಕ ಓದುವ ಹವ್ಯಾಸ ಅಳವಡಿಸಿಕೊಳ್ಳುವದಕ್ಕೆ ಸಹಕಾರಿ, ಪ್ರತಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪುಸ್ತಕ ಸ್ಟ್ಯಾಂಡ್‌ ಅಳವಡಿಕೆ

ಕನ್ನಡಪ್ರಭ ವಾರ್ತೆ ಬೀದರ್‌

ಕನ್ನಡ ಪುಸ್ತಕಗಳು ಓದುಗರಿರುವ ಜಾಗದಲ್ಲಿಯೇ ದೊರಕುವಂತಾಗಬೇಕು ಎಂಬ ನಿಟ್ಟಿನಲ್ಲಿ ವೀರಕಪುತ್ರ ಶ್ರೀನಿವಾಸ ಅವರು ವೀರಲೋಕ ಬುಕ್ಸ್‌ ಮೂಲಕ ಕಳೆದ ಒಂದೂವರೆ ವರ್ಷದಿಂದ ರಾಜ್ಯಾದ್ಯಂತ ಬಹಳ ಕ್ರೀಯಾಶಿಲವಾಗಿ ಮತ್ತು ವಿಭಿನ್ನವಾಗಿ ಪುಸ್ತಕದ ಕುರಿತು ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದು ಇದೀಗ ಅದಕ್ಕೆ ಬೀದರ್‌ನಲ್ಲಿಯೂ ಚಾಲನೆಗೆ ತರಲಾಗಿದ್ದು ನಗರದ ಪ್ರಮುಖ ಕಾಲೇಜು, ಉದ್ಯಾನ ಅಕ್ಕಪಕ್ಕದ ಮತ್ತಿತರೆಡೆ ಪುಸ್ತಕಗಳು ಖರೀದಿಗೆ ಸಿಗುವಂತೆ ಮಾಡಲಾಗಿದೆ.

ಖ್ಯಾತ ನಟ ರಮೇಶ ಅರವಿಂದ ಅವರನ್ನ ವೀರಲೋಕದ ರಾಯಭಾರಿಯನ್ನಾಗಿಸಿ ಬಹಳ ಅರ್ಥಪೂರ್ಣವಾಗಿ ಪುಸ್ತಕಗಳ ಬಿಡುಗಡೆ, ಮರು ಬಿಡುಗಡೆ, ರಾಜ್ಯಾದ್ಯಂತ ಕಥಾ ಕಮ್ಮಟಗಳ ಆಯೋಜನೆ, ಹೊಸ ವರ್ಷದಂದು ಪುಸ್ತಕ ರಾತ್ರಿ ಮೂಲಕ ಸ್ವಾಗತ, ಹೊಸ ಲೇಖಕರಿಗೆ ಅವಕಾಶ ಒದಗಿಸುವುದರ ಮೂಲಕ ಸಾಹಿತ್ಯಾಸಕ್ತರ ಮತ್ತು ಪುಸ್ತಕ ಪ್ರೇಮಿಗಳಿಗೆ ಹತ್ತಿರವಾಗುತ್ತಿರುವ ವೀರಲೋಕ ಬುಕ್ಸ್ ಗಡಿ ಜಿಲ್ಲೆಯಾದ ಬೀದರ್‌ನಲ್ಲಿಯೂ ತನ್ನ ಛಾಪು ಮೂಡಿಸುವ ಮೂಲಕ ಓದುಗರ ಮನ ಮನೆ ಮುಟ್ಟುವಂತೆ ಮಾಡುವಲ್ಲಿ ಮತ್ತು ಮಕ್ಕಳೂ ಪುಸ್ತಕ ಓದುವ ಹವ್ಯಾಸ ಅಳವಡಿಸಿಕೊಳ್ಳುವದಕ್ಕೆ ಸಹಕಾರಿಯಾಗಿದೆ.

ಈ ಹಿಂದೆ ಬೀದರ್‌ನಲ್ಲಿ ವೀರಲೋಕ ಪ್ರಕಾಶನದ ಹತ್ತು ಪುಸ್ತಕಗಳ ಮರು ಬಿಡುಗಡೆ ಮತ್ತು ಎರಡು ದಿನಗಳ ಕಥಾ ಕಮ್ಮಟ ಅತ್ಯಂತ ಯಶಸ್ವಿಯಾಗಿ ಜರುಗಿತ್ತು. ಇದೀಗ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟದ ಯೋಜನೆಯಾದ ''''''''ಸ್ವಯಂಕೃಷಿ'''''''' ಯೋಜನೆ ಕೂಡ ಬೀದರ್‌ನಲ್ಲಿ ಪ್ರಾರಂಭಿಸಲಾಗಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಗುರುನಾಥ ರಾಜಗೀರಾ ತಿಳಿಸಿದ್ದಾರೆ.

ಪ್ರತಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪುಸ್ತಕ ಸ್ಟ್ಯಾಂಡ್‌:

ಪ್ರತಿ ಭಾನುವಾರದಂದು ಜನರು ಹೆಚ್ಚಾಗಿ ಸೇರುವ ಹೋಟೆಲ್‌, ಉದ್ಯಾನವನ, ಸಿನಿಮಾ ಥಿಯೇಟರ್‌, ಪ್ರವಾಸಿ ತಾಣಗಳಂತಹ ಸ್ಥಳಗಳಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಮಾಡಬೇಕೆಂಬ ಸದುದ್ದೇಶದಿಂದ ಬೆಂಗಳೂರಿನಲ್ಲಿ ನೂರು ಕಡೆ ಸ್ವಯಂಕೃಷಿ ಯೋಜನೆ ಪ್ರಾರಂಭಗೊಂಡಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ವೀರಕಪುತ್ರ ಶ್ರೀನಿವಾಸ ಅವರು ಹೇಳಿದರು.

ಬಿವಿಬಿ, ಕರ್ನಾಟಕ ಫಾರ್ಮಸಿ ಕಾಲೇಜು ಹಾಗೂ ಬರೀದಶಾಹಿ ಗಾರ್ಡನ್‌:

ಇದರ ಭಾಗವಾಗಿ ಗಡಿ ಜಿಲ್ಲೆ ಬೀದರ್‌ನಲ್ಲಿಯೂ ಕನ್ನಡಿಗರಿರುವ ಕಡೆಯೇ ಕನ್ನಡ ಪುಸ್ತಕಗಳನ್ನು ತಲುಪಿಸುವ ಸ್ವಯಂಕೃಷಿ ಯೋಜನೆ ಚಾಲನೆಗೊಂಡಿದ್ದು ಮೊದಲ ಭಾನುವಾರ ಬೀದರ್‌ ನಗರದ ಬಿವಿಬಿ ಕಾಲೇಜು, ಕರ್ನಾಟಕ ಫಾರ್ಮಸಿ ಕಾಲೇಜು, ಬರೀದಶಾಹಿ ಗಾರ್ಡನ್‌, ಶಿವನಗರ ಫುಟಪಾತ್‌, ಹೊಸ ಬಸ್ ನಿಲ್ದಾಣಗಳಲ್ಲಿ ವೀರಲೋಕದ ಬುಕ್‌ ಸ್ಟ್ಯಾಂಡ್‌ಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಜರುಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಇದನ್ನು ಪ್ರತಿ ಭಾನುವಾರದಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದ್ದಾರೆ.

ವೀರಲೋಕ ಪುಸ್ತಕದ ಸ್ಟಾಂಡ್‌ ಇಟ್ಟು ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಮಾಡುವ ಕನ್ನಡಾಭಿಮಾನಿಗೆ ವೀರಲೋಕದಿಂದ ₹750 ಸಂದಾಯವಾಗುತ್ತದೆ. ತಿಂಗಳಲ್ಲಿ ನಾಲ್ಕುವಾರ ಈ ಕೆಲಸ ಮಾಡಿದರೆ ₹3000 ಹಣ ಸಿಗುತ್ತದೆ. ಆದ್ದರಿಂದ ಇದಕ್ಕೆ ಸ್ವಯಂಕೃಷಿ ಅಂತ ಹೆಸರಿಟ್ಟಿದ್ದು ಕೇವಲ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಯೋಜನೆಯನ್ನು ಬೀದರ್‌ನಲ್ಲೂ ಪ್ರಾರಂಭಿಸಲಾಗಿದ್ದು ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಕನ್ನಡ ಪುಸ್ತಕವನ್ನು ಖರೀದಿಸಿ ಓದಬೇಕು ಎಂದು ಗುರುನಾಥ ರಾಜಗೀರಾ ಮನವಿ ಮಾಡಿದರು.