ಕೈ ಮುಗಿಯಲು ಸಿಕ್ತು ಜ್ಞಾನದೇಗುಲ!

| Published : Feb 26 2024, 01:32 AM IST

ಸಾರಾಂಶ

ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂದು ಕುವೆಂಪು ಅವರು ಹೇಳಿದ್ದ ಘೋಷವಾಕ್ಯ ಇಲ್ಲಿನ ಮಕ್ಕಳಿಗೆ ಅನ್ವಯವಾಗಿರಲಿಲ್ಲ. ಏಕೆಂದರೆ ಇಲ್ಲಿನ ಮಕ್ಕಳಿಗೆ ಕೈ ಮುಗಿಯಲು ದೇಗುಲವೇ ಇರಲಿಲ್ಲ. ಇದ್ದ ಶಾಲೆ ಕೊಠಡಿಗಳು ಶಿಥಿಲಗೊಂಡು ಆಟದ ಮೈದಾನದಲ್ಲಿ ಕುಳಿತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೇ ನೆಲೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂದು ಕುವೆಂಪು ಅವರು ಹೇಳಿದ್ದ ಘೋಷವಾಕ್ಯ ಇಲ್ಲಿನ ಮಕ್ಕಳಿಗೆ ಅನ್ವಯವಾಗಿರಲಿಲ್ಲ. ಏಕೆಂದರೆ ಇಲ್ಲಿನ ಮಕ್ಕಳಿಗೆ ಕೈ ಮುಗಿಯಲು ದೇಗುಲವೇ ಇರಲಿಲ್ಲ. ಇದ್ದ ಶಾಲೆ ಕೊಠಡಿಗಳು ಶಿಥಿಲಗೊಂಡು ಆಟದ ಮೈದಾನದಲ್ಲಿ ಕುಳಿತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೇ ನೆಲೆ ಸಿಕ್ಕಿದೆ. ಫೆ.24ರಂದು ಪ್ರಕಟವಾದ ಜ್ಞಾನವಿದೆ, ಕೈ ಮುಗಿಯಲು ದೇಗುಲವಿಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಕನ್ನಡಪ್ರಭ ವರದಿಯಿಂದ ಸ್ಪಂದಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಅಲ್ಲಿನ ಮಕ್ಕಳಿಗೆ ಸೂರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ನಗರದ ನವಭಾಗದ ಹಮೀದ್‌ ನಗರದಲ್ಲಿರುವ ಸರ್ಕಾರಿ ಕಿರಿಯ ಉರ್ದು ಶಾಲೆ ನಂ.17ರಲ್ಲಿ 3 ಕೊಠಡಿಗಳಿದ್ದು, ಆ 3 ಕೊಠಡಿಗಳಲ್ಲಿ ಸಹಿತ ಮಕ್ಕಳು ಕುಳಿತುಕೊಂಡು ಪಾಠ ಕೇಳಲು ಆಗುತ್ತಿರಲಿಲ್ಲ. ಕೊಠಡಿಗಳೆಲ್ಲ ಶಿಥಿಲಗೊಂಡು, ಕೂರಲು ಆಗದಷ್ಟು ಆ ಕೊಠಡಿಗಳ ವ್ಯವಸ್ಥೆ ಹದಗೆಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಉರ್ದು ಶಾಲೆಯ 75 ಮಕ್ಕಳನ್ನು ಬಯಲಲ್ಲೇ ಚಾಪೆ ಹಾಸಿ ಕೂರಿಸಿ ಪಾಠ ಮಾಡುತ್ತಿದ್ದರು. ಮಕ್ಕಳಿಗೆ ಬೆಂಚ್ ಹಾಗೂ ಡೆಸ್ಕ್ ವ್ಯವಸ್ಥೆ ಇರಲಿಲ್ಲ. ಇದ್ದ ಕೊಠಡಿಗಳ ಛಾವಣಿ ಕುಸಿದಿದ್ದರೇ, ಗೋಡೆಗಳೆಲ್ಲ ಬಿರುಕು ಬಿಟ್ಟಿದ್ದವು. ನೆಲಹಾಸು ಸಂಪೂರ್ಣವಾಗಿ ಕಿತ್ತುಹೋಗಿ, ಹೆಗ್ಗಣಗಳು ಮನೆ ಮಾಡಿದ್ದವು. ಮಳೆ ಬಂದರೇ ಸೋರುವ ಶಾಲೆ ಇದಾಗಿದ್ದು, ಶಾಲೆ ಯಾವಾಗ ಮಕ್ಕಳ ಮೈಮೇಲೆ ಬೀಳುತ್ತದೋ ಎಂದು ಆತಂಕದಲ್ಲಿದ್ದ ಶಿಕ್ಷಕರು 1ನೇ ತರಗತಿಯಿಂದ 5ನೇ ತರಗತಿಯವರೆಗೆ ಇದ್ದ ಎಲ್ಲ ಮಕ್ಕಳನ್ನೂ ಬಯಲಲ್ಲೇ ಚಾಪೆಯ ಮೇಲೆ ಕೂರಿಸಿ ಪಾಠ ಮಾಡ್ತಿದರು.

ವರದಿ ಬಳಿಕ ಸಕಲ ವ್ಯವಸ್ಥೆ:

ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಅಂದೇ ವಿದ್ಯಾರ್ಥಿಗಳ ಸಮಸ್ಯೆ ಅರಿತ ನಗರ ಬಿಇಒ ಬಸವರಾಜ್ ತಳವಾರ ಶಾಲೆಗೆ ಭೇಟಿ ನೀಡಿದ್ದಾರೆ. ಬಳಿಕ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಆವರಣದಲ್ಲೇ ಇರುವ ಮೌಲಾನಾ ಅಬ್ದುಲ್ ಕಲಾಂ‌ ಆಜಾದ್ ಶಾಲೆಯಲ್ಲಿ 2 ದೊಡ್ಡ ಕೊಠಡಿಗಳಿಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ಬಯಲಲ್ಲೇ ಕುಳಿತು ಪಾಠ ಕೇಳುತ್ತಿದ್ದ ಮಕ್ಕಳಿಗೆ ಕೊಠಡಿ ಭಾಗ್ಯ ದೊರೆತಿದೆ. ಇನ್ನೂ ಹಾಳಾದ ಉರ್ದು ಪ್ರಾಥಮಿಕ ಶಾಲೆಯ ಕೊಠಡಿಗಳನ್ನು‌ ಮುಂದಿನ‌ ಶೈಕ್ಷಣಿಕ ವರ್ಷದ ಆರಂಭದಲ್ಲೇ ದುರಸ್ತಿ ಮಾಡಿ ಕೊಡುವ ಭರವಸೆ ನೀಡಿದ್ದಾರೆ.

ಸಂತಸಗೊಂಡ ಶಾಲಾ ಮಕ್ಕಳು, ಪಾಲಕರು:

ಬಯಲಲ್ಲೇ ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ಮಕ್ಕಳಿಗೆ ಸುಸಜ್ಜಿತ ಕಟ್ಟಡದ ಜೊತೆಗೆ ಬೆಂಚ್ ಹಾಗೂ ಡೆಕ್ಕ್ ವ್ಯವಸ್ಥೆ ಇರುವ ಕೊಠಡಿಗಳು ಸಿಕ್ಕಿದ್ದು ಶಾಲಾ ಮಕ್ಕಳ ಜೊತೆಗೆ ಪಾಲಕರು ಹಾಗೂ ಶಾಲೆಯ ಶಿಕ್ಷಕರೂ ಸಂತಸಗೊಂಡಿದ್ದಾರೆ. ಶಾಲಾ ಕೊಠಡಿ ಇಲ್ಲದೆ ಮಕ್ಕಳೆಲ್ಲ ಬಯಲಲ್ಲಿ ಕುಳಿತು ಪಾಠ ಕಲಿಯುವುದು ನೋಡಿದಾಗ ಕರುಳು ಚುರ್ ಎನ್ನುತ್ತಿತ್ತು. ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಬಳಿಕ ಶಾಲೆಯ ಎಲ್ಲ ಮಕ್ಕಳಿಗೆ ಸೂಕ್ತ ಸೂರಿನ ವ್ಯವಸ್ಥೆ ಸಿಕ್ಕಿದ್ದು, ಪಾಲಕರಿಗೆ ನೆಮ್ಮದಿ ಸಿಕ್ಕಂತಾಗಿದೆ. ಆದಷ್ಟು ಬೇಗ ಶಿಥಿಲಗೊಂಡ ಕೊಠಡಿಗಳನ್ನು ದುರಸ್ತಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವಂತಾಗಬೇಕಿದೆ.

-ಮಹಮ್ಮದ್‌, ಪಾಲಕರು.ಕನ್ನಡಪ್ರಭ ವರದಿ ನೋಡಿ ಶಾಲೆಗೆ ಭೇಟಿ ನೀಡಿದ್ದು, ಅಲ್ಲಿರುವ 1 ರಿಂದ 7ನೇ ತರಗತಿಯ 67 ಮಕ್ಕಳಿಗೆ ಮೌಲಾನಾ ಆಜಾದ್ ಶಾಲೆಗೆ ಶಿಫ್ಟ್ ಮಾಡಿ, ಎರಡು ಕೊಠಡಿಗಳನ್ನು ಕೊಡಿಸಿ ಪಾಠ ಕಲಿಯಲು ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಗೆ 5 ಲಕ್ಷದಂತೆ ಮೂರು ಕೊಠಡಿಗಳಿಗೆ ಕ್ರಿಯಾ ಯೋಜನೆ ಸಿದ್ದವಾಗಿದ್ದು, ಅಪ್ರೂವಲ್ ತಗೊಂಡು ಕೆಲಸ ಶುರು ಮಾಡಲಾಗುತ್ತದೆ. ಶಾಲಾ ರಜೆಯಲ್ಲಿ ಕೆಲಸ ಆರಂಭಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಸುಸಜ್ಜಿತ ಕಟ್ಟಡ ಸಿಗುವಂತೆ ಮಾಡಲಾಗುವುದು.ಬಸವರಾಜ ತಳವಾರ, ನಗರ ಕ್ಷೇತ್ರ ಶಿಕ್ಷಣಾಧಿಕಾರಿ.