ಕಾರಟಗಿ ಪುರಸಭೆ ಕೈ ವಶಕ್ಕೆ

| Published : Aug 28 2024, 12:48 AM IST

ಸಾರಾಂಶ

ಇಲ್ಲಿನ ಪುರಸಭೆಯ ೨ನೇ ಅವಧಿ ಸಹ ಕೈ ಪಾಲಾಗಿದ್ದು, ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಆಯ್ಕೆಯಾದರು. ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು.

ಬಿಜೆಪಿಗೆ ತೀವ್ರ ಮುಖಭಂಗ: ಚುನಾವಣೆಯಲ್ಲಿ ಪಾಲ್ಗೊಂಡ ಸಚಿವ-ಸಂಸದ

ಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಪುರಸಭೆಯ ೨ನೇ ಅವಧಿ ಸಹ ಕೈ ಪಾಲಾಗಿದ್ದು, ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಆಯ್ಕೆಯಾದರು. ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು.

ಪುರಸಭೆ ಎರಡನೇ ಅವಧಿ ಆಡಳಿತಕ್ಕೆ ಅಧ್ಯಕ್ಷ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿತ್ತು. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್‌ದಿಂದ ರೇಖಾ ರಾಜಶೇಖರ ಆನೆಹೊಸೂರು ಮತ್ತು ಬಿಜೆಪಿಯಿಂದ ಮೌನಿಕಾ ಧನಂಜಯ್, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ದೇವಮ್ಮ ಛಲವಾದಿ ಹಾಗೂ ಬಿಜೆಪಿಯ ಆನಂದ ಮ್ಯಾಗಳಮನಿ ನಾಮಪತ್ರ ಸಲ್ಲಿಸಿದ್ದರು.

ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಕೊನೆ ಗಳಿಗೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕ ನಡೆದ ಚುನಾವಣೆಯಲ್ಲಿ ಸದಸ್ಯರೆಲ್ಲರೂ ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ರೇಖಾ ಆನೆಹೊಸೂರಗೆ ೧೩ ಮತಗಳು, ಬಿಜೆಪಿಯ ಮೌನಿಕಾ ಧನಂಜಯಗೆ ಕೇವಲ ೮ ಮತಗಳು ಬಿದ್ದವು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವಮ್ಮ ಛಲವಾದಿಗೆ ೧೩, ಬಿಜೆಪಿಯ ಆನಂದ ಮ್ಯಾಗಳಮನಿಗೆ ೮ ಮತಗಳ ಬಿದ್ದರಿಂದ ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಆಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಘೋಷಣೆ ಮಾಡಿದರು.

ಮುಖಭಂಗ:ಒಟ್ಟು ೨೩ ಸದಸ್ಯರ ಪೈಕಿ ೧೧-ಕಾಂಗ್ರೆಸ್, ೧೧-ಬಿಜೆಪಿ ಒಬ್ಬರು ಜೆಡಿಎಸ್‌ದಿಂದ ಆಯ್ಕೆಯಾಗಿದ್ದರು. ೨೧ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಾಮಣ್ಣ ಭಜಂತ್ರಿ ಇತ್ತೀಚೆಗೆ ಮೃತಪಟ್ಟಿದ್ದರಿಂದ ಕಾಂಗ್ರೆಸ್ ಸದಸ್ಯರ ಬಲ 10ಕ್ಕೆ ಕುಸಿದಿತ್ತು. ಬಿಜೆಪಿ ೧೧ ಸದಸ್ಯರ ಪೈಕಿ ೩ ಕಾಂಗ್ರೆಸ್‌ದಿಂದ ಗುರುತಿಸಿಕೊಂಡಿದ್ದರು. ಅವರಿಗೆ ಪಕ್ಷ ವಿಪ್ ಜಾರಿ ಮಾಡಿದ್ದ ಹಿನ್ನೆಲೆ ಅವರು ಚುನಾವಣೆಗೆ ಗೈರಾಗಿದ್ದರು. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಯಿತು.

ಬಿಜೆಪಿಯ ವಾರ್ಡ್ ೧೦ರ ಸುಪ್ರಿಯಾ ಅರಳಿ, ೧೬ರ ಎಚ್.ಈಶಪ್ಪ ಮತ್ತು ೨೩ನೇ ವಾರ್ಡ್‌ನ ಜಿ.ಅರುಣಾದೇವಿ ಗೈರಾಗುವ ಮೂಲಕ ಬಿಜೆಪಿ ಮುಖಭಂಗಕ್ಕೆ ಕಾರಣರಾದರು. ಕಾಂಗ್ರೆಸ್‌ನ ೧೦ ಸದಸ್ಯರು, ಜೆಡಿಎಸ್‌ನ ಒಬ್ಬರು ಸೇರಿ ಸಚಿವ ಶಿವರಾಜ್ ತಂಗಡಗಿ ಮತ್ತು ಸಂಸದ ರಾಜಶೇಖರ್ ಹಿಟ್ನಾಳ ಸಹ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಒಟ್ಟು ೧೩ ಮತಗಳಿಂದ ಪುರಸಭೆ ಆಡಳಿತವನ್ನು ಕಾಂಗ್ರೆಸ್ ತನ್ನ ವಶಕ್ಕೆ ತೆಗೆದುಕೊಂಡಿತು.

ವಿಜಯೋತ್ಸವ:

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪುರಸಭೆ ಆವರಣರದ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಠಾಕಿ ಸಿಡಿಸಿ, ಸಿಹಿ ಹಂಚಿ ವಿತರಣೆ ಮಾಡಿ ವಿಜಯೋತ್ಸವ ಆಚರಿಸಿದರು. ಚುನಾವಣೆ ವೇಳೆ ಬಿಗಿ ಪೋಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಅಧ್ಯಕ್ಷರಾಗಿ ರೇಖಾ ಆನೆಹೊಸೂರು ಆಯ್ಕೆ ಬಹುತೇಕ ಖಚಿತ ಎಂದು ಕನ್ನಡಪ್ರಭ ಅ.26ರಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಎಂದೂ ಸೇಡಿನ ರಾಜಕೀಯ ಮಾಡಿಲ್ಲ:

ಚುನಾವಣೆ ಪ್ರಕ್ರಿಯೆ ಬಳಿಕ ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ ಹಿಟ್ನಾಳ ಕಾರಟಗಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬಂದಿದೆ ಎಂದು ಘೋಷಣೆ ಮಾಡಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಚಿವ ತಂಗಡಗಿ, ರಾಜಕೀಯ ಜಿದ್ದಾಜಿದ್ದಿ, ರಾಜಕೀಯ ಸೇಡು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಜಿದ್ದಾಜಿದ್ದಿ ಸಹಜವಾಗಿರುತ್ತೆ. ಆದರೆ ನನ್ನ ರಾಜಕೀಯ ಜೀವನದಲ್ಲಿ ನಾನು ಎಂದೂ ಸೇಡಿನ ರಾಜಕೀಯ ಮಾಡಿಲ್ಲ. ವಿರೋಧಪಕ್ಷವನ್ನು ಕೂಡಾ ನಾನು ಅಭಿವೃದ್ಧಿ ವಿಷಯದಲ್ಲಿ ಜೊತೆ ಜೊತೆಯಾಗಿ ಕರೆದುಕೊಂಡು ಹೋಗುತ್ತೇನೆ. ನಮ್ಮ ಪಕ್ಷದ ರೇಖಾ ರಾಜಶೇಖರ ಮತ್ತು ಉಪಾಧ್ಯಕ್ಷರಾಗಿ ನಮ್ಮ ಅಭ್ಯರ್ಥಿ ದೇವಮ್ಮ ಗೆಲುವು ಸಾಧಿಸಿದ್ದಾರೆ. ಕಾರಟಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.