ಸಾರಾಂಶ
ಇಲ್ಲಿನ ಸುಕ್ಷೇತ್ರ ಗಚ್ಚಿನಮಠದಲ್ಲಿ ಮೌನ ಯೋಗಿ ಮರುಳ ಶಂಕರ ದೇವರ 12ನೇ ಸ್ಮರಣೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ಸುಕ್ಷೇತ್ರ ಗಚ್ಚಿನಮಠದಲ್ಲಿ ಮೌನ ಯೋಗಿ ಮರುಳ ಶಂಕರ ದೇವರ 12ನೇ ಸ್ಮರಣೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.ಪಲ್ಲಕ್ಕಿ ಉತ್ಸವಕ್ಕೆ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಅಥಣಿಯ ಗಚ್ಚಿನ ಮಠವು ಶಿವಯೋಗದ ಶಿಖರವಾಗಿದೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳು ಮತ್ತು ಮೌನಯೋಗಿ ಮರುಳ ಶಂಕರ ದೇವರು ನಡೆದಾಡುವ ದೇವರು ಎನಿಸಿಕೊಂಡು ಈ ಭೂಮಿಯನ್ನು ಪಾವನಗೊಳಿಸಿದ್ದಾರೆ. ಶಿವಯೋಗ ಸಾಧನೆಯ ಮೂಲಕ ಮುರುಘೇಂದ್ರ ಸ್ವಾಮೀಗಳು ಅಥಣಿಯ ಶಿವಯೋಗಿಗಳೆಂದು ಪ್ರಖ್ಯಾತರಾದರು. ಪಂಚಾಕ್ಷರಿ ಗವಾಯಿಗಳು ತಮ್ಮ ಸಂಗೀತ ಸಾಧನೆಯ ಮೂಲಕ ಗಾನಯೋಗಿ ಎನಿಸಿಕೊಂಡರು. ಮೌನದಲ್ಲಿಯೇ ಇದ್ದುಕೊಂಡು, ಪರಿಶುದ್ಧ ಮನಸ್ಸಿನಿಂದ ಶಿವಯೋಗಿಗಳ ಸೇವೆ ಮಾಡಿದ ಮರುಳ ಶಂಕರ ದೇವರು ಮೌನಯೋಗಿಗಳೆಂದು ಪ್ರಖ್ಯಾತರಾಗಿದ್ದಾರೆ. ಅವರು ಯಾವುದೇ ಪೀಠಾಧಿಕಾರ ಬಯಸದೇ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಶತಾಯುಷಿಗಳಾಗಿ ಬದುಕಿ ಲಿಂಗೈಕರಾಗಿ ಇಂದಿಗೆ 12 ವರ್ಷ ಗತಿಸಿದರೂ ಕೂಡ ಅಥಣಿಯ ಸದ್ಭಕ್ತರ ಹೃದಯದಲ್ಲಿ ಇಂದಿಗೂ ಹಚ್ಚು ಹಸಿರಾಗಿದ್ದಾರೆ. ಇಂಥ ಮಹಾತ್ಮರ ಬದುಕೇ ನಮ್ಮೆಲ್ಲರಿಗೆ ಒಂದು ಆದರ್ಶ ಮತ್ತು ದಾರಿದೀಪವಾಗಿದೆ ಎಂದು ಬಣ್ಣಿಸಿದರು.ಸುಕ್ಷೇತ್ರ ಗಚ್ಚಿನಮಠದಿಂದ ಆರಂಭವಾದ ಮರುಳ ಶಂಕರ ದೇವರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ಗಚ್ಚಿನಮಠದಲ್ಲಿ ಸಮಾವೇಶಗೊಂಡಿತು. ನಂತರ ಮಧ್ಯಾಹ್ನ ಸಾವಿರಾರು ಸದ್ಭಕ್ತರು ಶಿವಯೋಗಿಗಳ ಮತ್ತು ಮರಳು ಶಂಕರ ದೇವರ ಗದ್ದುಗೆಯ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರು. ಗಚ್ಚಿನ ಮಠದ ಸೇವಾರ್ಥಿಗಳು ಅನ್ನ ಸಂತ್ರಪಣೆಯ ಕಾರ್ಯ ಕೈಗೊಂಡಿದ್ದರು.ಈ ಸಂದರ್ಭದಲ್ಲಿ ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ, ನಿತ್ಯಾನಂದ ಚಿರಂತಿಮಠ, ಮಹದೇವ ಹೊನ್ನಳ್ಳಿ, ಬಸು ಹಳ್ಳದಮಳ, ಶ್ರೀಶೈಲ ಹಳ್ಳದಮಳ, ಚನ್ನಬಸಯ್ಯ ಇಟ್ನಳಮಠ, ವಿವೇಕ ಮೆಣಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.