ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿರುವುದನ್ನು ಖಂಡಿಸಿ ಕರ್ನಾಡಕ ಜನರಂಗ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಬುಧವಾರ 48 ಗಂಟೆಗಳ ಧರಣಿ ಸತ್ಯಾಗ್ರಹ ಆರಂಭಿಸಿದರು.ನಗರದ ಚಿಕ್ಕಗಡಿಯಾರ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿರುವ ವಿವಿಧ ಪ್ರಗತಿಪರ ಸಂಘಟನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯಕ್ಕೆ ದೊರೆಯಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ. ಅಲ್ಲದೆ ಕೇಂದ್ರ ಸರ್ಕಾರವು ಬರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು 1.87 ಲಕ್ಷ ಕೋಟಿ ತೆರಿಗೆ ಪಾಲನ್ನು ನೀಡದೆ ಕೇಂದ್ರ ಸರ್ಕಾರ ವಂಚಿಸಿದೆ. ನಮ್ಮ ತೆರಿಗೆ ನಮ್ಮ ಹಕ್ಕು, ಇಲ್ಲ ಅನ್ನಲು ನೀವ್ಯಾರು? ಕರ್ನಾಟಕ ಅನ್ಯಾಯ ಪ್ರಶ್ನಿಸುತ್ತಿದೆ ಉತ್ತರ ನೀಡಿ? ಎಂಬ ಘೋಷಣೆ ಕೂಗಿದರು.ಮಾಜಿ ಸಚಿವ ಬಿ. ಸೋಮಶೇಖರ್ ಮಾತನಾಡಿ, ಕೋಮುವಾದಿ ಬಿಜೆಪಿ, ಜಾತಿವಾದಿ ಜೆಡಿಎಸ್ ಎರಡೂ ಪಕ್ಷಗಳು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾರಕ. ಬಿಜೆಪಿ ಸರ್ಕಾರದ ಕೆಟ್ಟ ಆಡಳಿತವನ್ನು ನಾವು ಪ್ರಶ್ನಿಸಬೇಕಿದೆ. ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಕರಾಳ ದಿನಗಳನ್ನೇ ಅನುಭವಿಸಿದ್ದೇವೆ. ಸುಳ್ಳು ಹೇಳಿಕೊಂಡೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕುಡುತ್ತೇವೆ. ಪ್ರತಿ ಕುಟುಂಬಕ್ಕೆ 15 ಲಕ್ಷ ಹಾಕುತ್ತೇವೆ ಎಂಬ ಸುಳ್ಳನ್ನು ಹೇಳಿದರು. ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅನ್ನೇ ಬರೆಸುವ ಮೂಲಕ ಇವರ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಮುಖವಾಡ ಕಳಚಿಬಿದ್ದಿದೆ. ಹಾಗಾಗಿ ಈ ಬಾರಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ಚಿಂತಕರು, ಸಾಹಿತಿಗಳು, ಆಯ್ದ ಕಲಾವಿದರು, ಕೆಲವು ವಕೀಲರು, ರೈತ ಸಂಘಟನೆಯ ಪದಾಧಿಕಾರಿಗಳು, ಪೌರಕಾರ್ಮಿಕರು, ದಸಂಸ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಒಡನಾಡಿ, ಪಿಯುಸಿಎಲ್, ಕಮ್ಯುನಿಸ್ಟ್, ಕಾರ್ಮಿಕ ಒಕ್ಕೂಟ, ಕಾಂಗ್ರೆಸ್ ನ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೆರಿಗೆಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಮೋಸದ ವಿರುದ್ಧದ ಚಳವಳಿ ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭವಾಗಿದೆ. ಬಿಜೆಪಿಯ ಸುಳ್ಳು ಕೇಂದ್ರ ಸರ್ಕಾರ ಜನರನ್ನು ಧಿಕ್ಕು ತಪ್ಪಿಸುತ್ತಿರುವ ಕುರಿತು ಕರ್ನಾಟಕ ಜನರಂಗದ ಮೂಲಕ ರಾಜ್ಯಾದ್ಯಂತ ಹೋರಾಟವನ್ನು ಕೊಂಡೊಯ್ಯಬೇಕು ಎಂದರು.
ಚಿಂತಕ ಪ್ರೊ.ಬಿ.ಪಿ. ಮಹೇಶ್ಚಂದ್ರಗುರು ಮಾತನಾಡಿ, ಮಹಾತ್ಮ ಗಾಂಧಿ ಅಂದು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಇಂದು ನಾವು ಕ್ವಿಟ್ ಎನ್.ಡಿ.ಎ ಕ್ವಿಟ್ ಮೋದಿ ಚಳವಳಿ ಮಾಡಬೇಕಿದೆ. ರಾಮಮಂದಿರ ಕಟ್ಟಿ ಚುನಾವಣೆ ಗೆದ್ದು ಆಯಿತು ಎಂದು ಬೀಗುತ್ತಿರುವ ಬಿಜೆಪಿಯವರಿಗೆ ರೈತರ ಚಳವಳಿ ಮೂಲಕ ವಿಸ್ಮೃತಿಯನ್ನು ಅಳಿಸಿಹಾಕಲಾಗಿದೆ. ವಿರೋಧಿಸುವವರನ್ನು ತುಳಿಯುವ ಸಲುವಾಗಿ ಈ ಸರ್ಕಾರ ಬಂದಿದೆ. ನಮ್ಮ ತೆರಿಗೆ ಕೊಡಿ ಎಂದು ಕೇಳುವ ಮಟ್ಟಕ್ಕೆ ನಾವು ಬಂದಿದ್ದೇವೆ ಎಂದರೆ ಇದು ಒಕ್ಕೂಟ ವ್ಯವಸ್ಥೆಗೆ ಮಾರಕ. ಈಗ ನಾವು ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಈ ಚುನಾವಣೆ ಸ್ವತಂತ್ರ ಭಾರತದ ಕೊನೆ ಚುನಾವಣೆಯಾಗಲಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಮೈಮ್ ರಮೇಶ್, ಎಚ್. ಜನಾರ್ಧನ್, ಲೇಖಕಿ ಸುಲೇಖಾ, ಮೋಹನ್‌ಕುಮಾರ್ ಗೌಡ, ಎಂ. ಚಂದ್ರಶೇಖರ್, ಟಿ. ಗುರುರಾಜ್, ನಜರಬಾದ್ ನಟರಾಜು, ಕೆ.ಎಸ್. ಶಿವರಾಮು, ಸಿ. ರಾಜು, ಪುಟ್ನನಂಜಯ್ಯ ದೇವನೂರು, ಎಸ್. ಬಾಲಕೃಷ್ಣ, ಗುರುಮಲ್ಲೇಶ, ಹರಿಹರ ಆನಂದಸ್ವಾಮಿ, ಈಶ್ವರ ಚಕ್ಕಡಿ, ಪುರುಷೋತ್ತಮ್, ಟಿ.ಎಸ್. ಗುರುರಾಜ, ಯೋಗೀಶ ಉಪ್ಪಾರ ಮೊದಲಾದವರು ಇದ್ದರು.