ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳುವ ಮೂಲಕ ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಸುವ ಹಂತಕ್ಕೆ ಕನ್ನಡ ಭಾಷೆ ಅಭಿವೃದ್ಧಿಪಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ರಫೀಕ್ ಖಾನ್ ಹೇಳಿದರು.ಬುಧವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಸ್ಥಳೀಯ ಘಟಕ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಆಯೋಜಿಸಿದ್ದ ವಿಶ್ವ ಮಾತೃಭಾಷಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ. ಆದರೆ ಮಾತೃಭಾಷೆ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ಕನ್ನಡ ಅನ್ನ ನೀಡುವ ಭಾಷೆಯಾಗಿದ್ದು, ಅನ್ಯಭಾಷೆಗಳನ್ನು ದ್ವೇಷಿಸದೇ ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃಭಾಷೆಯ ಕಲಿಕೆ ಜೀವನದಲ್ಲಿ ಅಗತ್ಯವಾಗುತ್ತದೆ. ಮಾತೃಭಾಷೆ ಬಗ್ಗೆ ಅಭಿಮಾನವಿದ್ದ ಕಾರಣ ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವು ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಭಾಷೆ ಬಳಸುವ ಹಂತಕ್ಕೆ ಕನ್ನಡ ಭಾಷೆ ಅಭಿವೃದ್ಧಿಯಾಗಬೇಕು. ವಿಶ್ವ ಮಾತೃಭಾಷೆ ದಿನಾಚರಣೆ ಆಯೋಜಿಸುವ ಮೂಲಕ ಮಾತೃಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಒಂದು ಭಾಷೆ ನಶಿಸದಂತೆ ತಡೆಯಲು ಆ ಭಾಷೆಯನ್ನು ಹೆಚ್ಚು ಬಳಸಬೇಕು. ಮಾತೃಭಾಷೆ ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಭಾಷೆ ಉಳಿಸಿ ಬೆಳೆಸಬೇಕು.ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ಲೇಖಕರಾಗಿ, ಕವಿಗಳಾಗಿ ವಿದ್ಯಾರ್ಥಿಗಳು ಹೊರಹೊಮ್ಮುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ವಿಶ್ವ ಮಾತೃಭಾಷಾ ದಿನಾಚರಣೆ ಕುರಿತು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಉಪನ್ಯಾಸಕ ಬಂಗಾರಪ್ಪ ಮಾತನಾಡಿ, ಜಗತ್ತಿನಲ್ಲಿ 6 ಸಾವಿರಕ್ಕಿಂತ ಹೆಚ್ಚು ಭಾಷೆಗಳಿದ್ದು, ಶೇ.43ರಷ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಮಾತೃಭಾಷೆ ನಾಶವಾದರೆ, ನಮ್ಮ ಭಾವನೆ ಹಾಗೂ ಸಂಸ್ಕೃತಿ ನಾಶವಾಗುತ್ತದೆ. ಆದ್ದರಿಂದ ಅಳಿವಿನ ಅಂಚಿನಲ್ಲಿರುವ ಮಾತೃಭಾಷೆಗಳನ್ನು ಉಳಿಸಿ ಬೆಳೆಸಲು ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋ 2000 ಇಸವಿಯಿಂದ ವಿಶ್ವ ಮಾತೃಭಾಷೆ ದಿನಾಚರಣೆ ಆಚರಿಸುತ್ತಿದೆ. ನಮ್ಮ ಮಾತೃಭಾಷೆ ಕನ್ನಡಕ್ಕೆ 5 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಪಪ್ರಾಂಶುಪಾಲ ಟಿ.ಶ್ರೀನಿವಾಸ್, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಪಾಪಯ್ಯ, ಹಿರಿಯ ಶಿಕ್ಷಕಿ ಶಾಹಿನಾ ಬೇಗಂ ಸಹಿತ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ರಶ್ಮಿ ಪ್ರಾರ್ಥಿಸಿ, ಶಿವಲಿಂಗಪ್ಪ ಸ್ವಾಗತಿಸಿದರು. ರೇಷ್ಮಾ ಪರ್ವಿನ್ ನಿರೂಪಿಸಿ, ಸುರೇಶ್ ವಂದಿಸಿದರು.
- - - -21ಕೆ.ಎಸ್.ಕೆ.ಪಿ1:ವಿಶ್ವ ಮಾತೃಭಾಷಾ ದಿನ ಕಾರ್ಯಕ್ರಮವನ್ನು ಬಿಇಒ ಮಹಮ್ಮದ್ ರಫೀಕ್ ಖಾನ್ ಉದ್ಘಾಟಿಸಿದರು.