ಸಾರಾಂಶ
ಶನಿವಾರಸಂತೆ ಶ್ರೀ ವಿಘ್ನೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ರಾಷ್ಟ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ದೇಶದ ಏಕೈಕ ರಾಜ್ಯ ಕರ್ನಾಟಕ ಎಂದು ಭಾರತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಮಾಗಲು ಹೇಳಿದ್ದಾರೆ.ಶನಿವಾರಸಂತೆ ಶ್ರೀ ವಿಘ್ನೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹರಿದು ಹಂಚಿ ಹೋಗಿದ್ದ ಕಾಲದಲ್ಲಿ ಕನ್ನಡ ಉಳಿಸಿಕೊಳ್ಳಲು ಸಾಹಿತಿ, ಕವಿಗಳು ಮತ್ತು ಏಕೀಕರಣ ಹೋರಾಟಗಾರರ ಪರಿಶ್ರಮದಿಂದ ಕರ್ನಾಟಕ ದೇಶಕ್ಕೆ ಹಲವಾರು ಕೊಡುಗೆ ಕೊಟ್ಟಿದೆ ಎಂದರು.
ಕನ್ನಡಕ್ಕೆ ಎರಡು ಸಾವಿರ ವರ್ಷಕ್ಕಿಂತ ಹೆಚ್ಚಿನ ಇತಿಹಾಸ ಇದೆ, ಹಲ್ಮಿಡಿ ಶಾಸನವು ಕನ್ನಡ ಪ್ರಥಮ ಶಾಸನವಾಗಿದೆ. ದೇಶದಲ್ಲೆ ಪ್ರಥಮ ಆಕಾಶವಾಣಿ ನಿಲಯ ಪ್ರಾರಂಭಗೊಂಡಿದ್ದು ಕರ್ನಾಟಕದಲ್ಲೆ ಹೀಗೆ ಹತ್ತು ಹಲವು ಪ್ರಥಮಗಳನ್ನು ಕರ್ನಾಟಕ ಕೊಟ್ಟಿದೆ ಎಂದು ವಿವರಿಸಿದರು.ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜಿನ ಉಪನ್ಯಾಸಕ ಸರ್ಫ್‍ರಾಜ್ ಆಹಮ್ಮದ್ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದ್ದು ಜಾಗತಿಕ ಮಟ್ಟದಲ್ಲಿ ಆಂಗ್ಲ ಭಾಷೆಗೆ ಮನ್ನಣೆ ಕೊಟ್ಟು ಕನ್ನಡ ಭಾಷೆ ಕನ್ನಡಾಭಿಮಾನ ಮರೆತು ಹೋಗುತ್ತಿರುವುದು ಸರಿಯಲ್ಲ. ಕನ್ನಡ ಭಾಷೆ, ಕನ್ನಡತನದ ಬಗ್ಗೆ ಕನ್ನಡಿಗರಾದ ನಾವು ಹೆಮ್ಮೆ ಪಟ್ಟುಕೊಳ್ಳಬೇಕೆಂದರು.
ಕಾವೇರಿ ಪ.ಪೂ.ಕಾಲೇಜಿನ ಉಪನ್ಯಾಸಕ ಕಾಂತರಾಜು, ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜಿನ ಉಪನ್ಯಾಸಕ ಅಂಜನಪ್ಪ ಮಾತನಾಡಿದರು.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಸಿ.ರವಿ ಅಧ್ಯಕ್ಷತೆ ವಹಿಸಿದರು. ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಬಿ.ನಾಗರಾಜು ಉದ್ಘಾಟಿಸಿದರು.
ಭಾರತಿ ಪ.ಪೂ.ಕಾಲೇಜಿನ ಉಪನ್ಯಾಸಕ ಸೋಮಶೇಖರ್, ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಗುರುಬಸಪ್ಪ, ಅಶೋಕ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಭವಾನಿ, ಜೂರಾಬಿ, ಕೆಂಚಮ್ಮ, ವಿಶ್ವನಾಥ್, ಪುಟ್ಟಸ್ವಾಮಿ, ಮಲ್ಲೇಶ್, ಜಯಮ್ಮ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಮತ್ತಿರರಿದ್ದರು.ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಕುರಿತಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.