ಸಾರಾಂಶ
ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ನೀತಿಯಿಂದಾಗಿ ರೈತರು ಕಾರ್ಮಿಕರು, ದುಡಿಯುವ ವರ್ಗ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಬದಿ ವ್ಯಾಪಾರಿಗಳು ಬೀದಿಗೆ ಬರುವಂತಾಗಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಂತಾಗಿದೆ.ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ನಷ್ಟ ಉಂಟಾಗಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ, ಆದರೂ ಎರಡು ಸರ್ಕಾರಗಳು ರೈತರ ಸಹಾಯಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕಡಿಸಿದರು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಮತ್ತು ಅನೇಕ ರೈತ ಪರವಾದ ವಿಚಾರಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಸಂದರ್ಭದಲ್ಲಿ ಹೇಳಿತ್ತು, ಆದರೆ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಇದ್ಯಾವುದನ್ನು ಕಾರ್ಯಗತಗೊಳಿಸಿಲ್ಲ. ರೈತರ ಸಮಸ್ಯೆಗಳನ್ನು ಕೂಲಂಕುಶವಾಗಿ ಚರ್ಚಿಸುವ ಸಲುವಾಗಿ ಮೂರು ದಿನಗಳ ಕಾಲ ಜನತಾ ಅಧಿವೇಶನವನ್ನು ಕರೆಯಬೇಕು ಎಂದು ಆಗ್ರಹಿಸಿದರು.ಶರಾವತಿ ಮುಳುಗಡೆ ಸಂತ್ರಸ್ತರ ಜಮೀನನ್ನು ಅರಣ್ಯ ಇಲಾಖೆಯಿಂದ ಡಿ ನೋಟಿಫೈ ಮಾಡಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಯಾವುದೇ ಕಾರಣಕ್ಕೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಮತ್ತು ಕೂಡಲೇ ಇವರುಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ರೈತ ಸಮುದಾಯಕ್ಕೆ ಎಂಎಸ್‌ಪಿಯನ್ನು ಮಲ್ಯಾಧಾರಿತವಾಗಿ ಕಾನೂನು ಬದ್ಧ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ನಿರ್ಣಯ ಕಳಿಸಿ ಕೊಡಬೇಕು, ಕೇಂದ್ರ ಸರ್ಕಾರ ಸಹ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಘೋಷಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯನ್ನು ಕೂಡಲೇ ಕೈಬಿಡಬೇಕು. ರೈತ ಪರವಾದ ಬೆಳೆ ವಿಮೆ ಜಾರಿ ಮಾಡಬೇಕು, ಬೆಳೆ ವಿಮೆಯನ್ನು ಮುಂದಿನ ಬೆಳೆ ಬಿತ್ತುವ ಅವಧಿ ಒಳಗೆ ರೈತರ ಖಾತೆಗೆ ಪಾವತಿ ಮಾಡಬೇಕು. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು, ಸಂಪೂರ್ಣ ಸಾಲಮನ್ನಾ ಮಾಡಬೇಕು, ರೈತ ಮಹಿಳೆಯರ ಮೈಕ್ರೋ ಫೈನಾನ್ಸ್ ಸಾಲವನ್ನು ಸಹ ಮನ್ನಾ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕರ್ನಾಟಕ ಜನ ಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಪಂಚಾಕ್ಷರಿ, ಹನುಮಂತಪ್ಪ, ಕಸಟ್ಟಿ ರುದ್ರೇಶ್, ಕೆ.ರಾಘವೇಂದ್ರ ಚಂದ್ರಪ್ಪ ಹನುಮಮ್ಮ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))