ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಉತ್ಪನ್ನಗಳ ಮಾರುಕಟ್ಟೆ ದೇಶದ ರಾಜಧಾನಿ ದೆಹಲಿವರೆಗೂ ವಿಸ್ತರಿಸಿದ್ದು, ನಿಗಮದಿಂದ ತಯಾರಿಸಲ್ಪಟ್ಟ ತೆಂಗಿನ ನಾರಿನ ಮ್ಯಾಟ್ ಹಾಗೂ ಇತರ ಉತ್ಪನ್ನಗಳನ್ನು ದೆಹಲಿಗೆ ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಿಂದ ದೆಹಲಿಗೆ ಹೊರಟ ತೆಂಗಿನ ನಾರಿನ ಉತ್ಪನ್ನಗಳನ್ನು ಹೊಂದಿದ್ದ ಲಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತೆಂಗಿನ ನಾರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹಾಗೂ ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.ಅಲ್ಲದೆ, ತೆಂಗಿನ ನಾರಿನಿಂದ ಮ್ಯಾಟ್ ತಯಾರಿಸುವವರು ಸಿದ್ದರಾಮಯ್ಯ ಅವರ ನಿವಾಸದ ಆವರಣದಲ್ಲೇ ಮ್ಯಾಟ್ ತಯಾರಿಕೆ ಪ್ರಾತ್ಯಕ್ಷಿಕೆ ನೀಡಿದರು.
50,000 ಉದ್ಯೋಗ ಅವಕಾಶ ಸೃಷ್ಟಿ:
ಸುದ್ದಿಗಾರರೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ನಮ್ಮ ರಾಜ್ಯದ ತೆಂಗಿನ ನಾರಿನ ಉತ್ಪನ್ನಗಳಿಗೆ ವಿವಿಧ ರಾಜ್ಯಗಳಲ್ಲಿ ಬೇಡಿಕೆ ಇದ್ದರೂ ಇಷ್ಟು ದಿನ ಪೂರೈಸಲು ಆಗುತ್ತಿರಲಿಲ್ಲ. ಈಗ ಎಲ್ಲವನ್ನೂ ಅಧ್ಯಯನ ಮಾಡಿ ಮಾರುಕಟ್ಟೆ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ತಯಾರಾದ ಉತ್ಪನ್ನಗಳು ಇನ್ನು ಮುಂದೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿವೆ. ಜತೆಗೆ ಇದರಿಂದ ಸುಮಾರು 50,000 ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಹೇಳಿದರು.
ದೆಹಲಿಗೆ ಇನ್ನು ಮುಂದೆ ಪ್ರತಿ ತಿಂಗಳು ಎರಡ್ಮೂರು ಲೋಡ್ ಕಳುಹಿಸಲಾಗುವುದು. ಅಲ್ಲಿನ ಡೀಲರ್ ಎಲ್ಲಾ ಮಳಿಗೆಗಳಿಗೆ ಸರಬರಾಜು ಮಾಡಲಿದ್ದಾರೆ. ಹೀಗಾಗಿ ಇದು ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಪಾಲಿಗೆ ಸುರ್ವಣ ದಿನ ಎಂದರು.