ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾನೂನು ಸೇವೆಗಳು ಪ್ರಾಥಮಿಕವಾಗಿ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ 1987ರ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿವೆ. ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ, ಸಮರ್ಥ ಕಾನೂನು ನೆರವು ನೀಡುವ ಗುರಿಯನ್ನು ಹೊಂದಿವೆ. ಆರ್ಥಿಕ ಅಥವಾ ಇತರ ಅಂಗವೈಕಲ್ಯಗಳನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯವು ಲಭ್ಯವಾಗುವಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶವಾಗಿದೆ ಎಂದು ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಎಂ.ಕೆ. ಲೋಕೇಶ್ ಹೇಳಿದರು.

ಚಿತ್ರದುರ್ಗ ನಗರದ ಸಮೀಪದಲ್ಲಿರುವ ದಂಡಿನ ಕುರುಬರಟ್ಟಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಅವರು ಮಾತನಾಡಿದರು.

ಪೋಕ್ಸೊ ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಾಗಿದೆ. 2012ರಲ್ಲಿ ಜಾರಿಗೆ ಬಂದ ಈ ಕಾನೂನು 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಪೋರ್ನೋಗ್ರಫಿಯನ್ನು ತಡೆಯಲು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮತ್ತು ಮಕ್ಕಳಿಗೆ ನ್ಯಾಯ ಒದಗಿಸಲು ಇರುವ ವಿಶೇಷ ಕಾನೂನಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಸಿ.ಎಂ.ಮೂರ್ತಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಸೂಕ್ತವಾದ ಪರವಾನಗಿ ಹೊಂದಿರಬೇಕು. 18ವರ್ಷದ ಒಳಗಿರುವ ಮಕ್ಕಳು ಗಾಡಿ ಚಲಾಯಿಸಬಾರದು. ಹೊಲಗಳಿಗೆ ಹೋಗುವ ಕಾಲುದಾರಿಗಳನ್ನು ಸಹಕಾರ ಮನೋಭಾವದಿಂದ ಬಿಟ್ಟುಕೊಡಬೇಕು. ಗ್ರಾಮದಲ್ಲಿರುವ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು. ಗಾಡಿಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಿ ಅಪಘಾತಗಳಿಂದ ರಕ್ಷಣೆ ಪಡೆಯಬೇಕು ಎಂದರು.


ಕೆಎಸ್ಇಟಿ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್ ಮಾತನಾಡಿ, ಪರಿಸರ ದಿನಾಚರಣೆಗಳ ಬಗ್ಗೆ ಜಾಗೃತಿ ಹೊಂದಿರಬೇಕು. ಉತ್ತಮ ಪರಿಸರ ನಿರ್ವಹಣೆ ಬಗ್ಗೆ ಕಾರ್ಯಕ್ರಮಗಳಾಗಬೇಕು. ಗ್ರಾಮಗಳಲ್ಲೂ ಸಹ ಪಿಡಿಒಗಳು ಪರಿಸರದ ಬಗ್ಗೆ ಸಮಿತಿ ರಚಿಸಿಕೊಂಡು ಕೆರೆ ಸಂರಕ್ಷಣೆ ಮಾಡಿಕೊಳ್ಳಬೇಕು. ಕಾಲೇಜುಗಳ ಮುಂಭಾಗದಲ್ಲಿರುವ ಮರಗಳನ್ನು ಕಡಿದು ಕಟ್ಟಡಗಳನ್ನು ಕಟ್ಟುವುದನ್ನು ವಿದ್ಯಾರ್ಥಿಗಳು ವಿರೋಧಿಸಬೇಕು. ಖಾಲಿ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡು ಮರಗಳನ್ನು ಉಳಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ರವಿಕಾಂತ್ ಎಂ.ಎನ್ ಮಾತನಾಡಿ, ಜಾನಪದ ಜಾತ್ರೆಗಳ ಮುಖಾಂತರ ಯುವಜನರನ್ನು ಜಾಗೃತಗೊಳಿಸಿ ಗ್ರಾಮೀಣ ಜನರನ್ನು ಸಂಘಟಿಸಿ ಅವರಲ್ಲಿರುವ ಮೂಡ ನಂಬಿಕೆಗಳನ್ನು ದೂರ ಮಾಡಬೇಕು.ಜನರಲ್ಲಿ ಪರಿಸರ ಜ್ಞಾನವನ್ನು ಹೆಚ್ಚಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಪಿಡಿಒ ಶಿಲ್ಪಾ, ಸಣ್ಣಕ್ಕಿ ನಾಗಭೂಷಣ್, ಚಂದ್ರಶೇಖರ್ ರೆಡ್ಡಿ, ಜಯಣ್ಣ, ಜೀವನ್, ಮಹಾಂತೇಶ್, ಡಾ ಭಾರತಿ, ಮಂಜುನಾಥ, ಶಂಕರ್ ನಾಯಕ್, ಡಾ ರಮೇಶ್ ಭಟ್, ಡಾ. ಪ್ರಮೋದ್ ಕುಮಾರ್, ಡಾ ಚಂದನ್, ಡಾ ಪ್ರದೀಪ್ ಮುಂತಾದವರು ಹಾಜರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಜಾನಪದ ಜಾತ್ರೆಗಳನ್ನು ಹಮ್ಮಿಕೊಂಡಿರುವ ಚನ್ನಪಟ್ಟಣದಿಂದ ಆಗಮಿಸಿದ್ದ ಮಧು ಕುಡ್ಲೂರು, ಚೇತನ್, ಸಚಿನ್, ಅನುಷರವರು ವಿದ್ಯಾರ್ಥಿಗಳಿಗೆ ವಿವಿಧ ವೇಷಭೂಷಣಗಳನ್ನು ತೊಡಿಸಿ ಜಾನಪದ ಗೀತೆಗಳನ್ನು ಪರಿಚಯಿಸಿದರು.