ಧಾರವಾಡ:

ಜಿಲ್ಲೆಯಲ್ಲಿರುವ ಅನಧಿಕೃತ ಮದ್ಯದ ಅಂಗಡಿ ವಿರುದ್ಧ ಕ್ರಮ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ತಪಾಸಣೆ ತೀವ್ರಗೊಳಿಸಬೇಕು. ಅಕ್ರಮ ಚಟುವಟಿಕೆ ಕಂಡುಬಂದರೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಬಕಾರಿ ಇಲಾಖೆಯ ಸಾಯಿ ಸಮಿತಿ ಸಭೆ ಜರುಗಿಸಿದ ಅವರು, ನಕಲಿ ಮದ್ಯ ಹಾಗೂ ಕಳ್ಳ ಬಟ್ಟೆ ತಯಾರಿಕೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಇವುಗಳ ನಿರ್ಮೂಲನೆಗೆ ವಿಶೇಷ ತಂಡ ರಚಿಸಬೇಕು. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಆಗುತ್ತಿರುವ ದೂರುಗಳಿದ್ದು ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಬೇಕು. ರಾತ್ರಿ ವಾಹನ ಪರಿಶೀಲನೆ ಹೆಚ್ಚಿಸಿ, ಸಂಶಯಾಸ್ಪದ ವಾಹನ ತಡೆದು ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯಲು ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕು ಎಂ ಜಿಲ್ಲಾಧಿಕಾರಿ, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಬಳಕೆ ಹಾಗೂ ಅದರ ಪರಿಣಾಮ ನಿಯಂತ್ರಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಕ್ರಮ ನಡೆಸುತ್ತಿದೆ. ಈ ಮೂಲಕ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಬಳಕೆ, ಸಾಗಾಟ ಮತ್ತು ವಿತರಣೆ ಮೇಲೆ ನಿಗಾ ವಹಿಸಿದ್ದು ಅವರೊಂದಿಗೆ ಇಲಾಖೆಗಳ ಸಮನ್ವಯ ಸಾಧಿಸಬೇಕೆಂದು ಹೇಳಿದರು.

ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಮಾದಕ ವಸ್ತುಗಳಿಗೆ ಒಳಗಾಗಿರುವ ಅಥವಾ ಅವುಗಳ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ ಗುರುತಿಸಿ ನಿಗಾ ಇಡಲಾಗುತ್ತಿದೆ ಎಂದರು.


ಅಬಕಾರಿ ಇಲಾಖೆ ಉಪಆಯುಕ್ತ ರಮೇಶಕುಮಾರ ಎಚ್., ಅಬಕಾರಿ ಅಧೀಕ್ಷಕ ಮಂಜುನಾಥ ಅರೆಗುಳ ಮಾತನಾಡಿದರು. ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ವಿವಿಧ ಇಲಾಖೆಗಳ ಅಜಯ ಎನ್., ಡಾ. ಎಸ್.ಎಂ. ಹೊನಕೇರಿ ಇದ್ದರು.