ಕನ್ನಡಪ್ರಭ ವಾರ್ತೆ ಕಾರವಾರ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರವಾರದ ಸರ್ಕಾರಿ ಪದವಿಪೂರ್ವ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇ. 91.8ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 487 ಹೊಸ ವಿದ್ಯಾರ್ಥಿಗಳ ಪೈಕಿ 447 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಬರೋಬ್ಬರಿ 101 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 274 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.ಕಾಲೇಜಿನ ವಿಭಾಗವಾರು ಫಲಿತಾಂಶದಲ್ಲಿ, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು, ಅಂದರೆ ಶೇ. 92.7 ರಷ್ಟು ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಈ ವಿಭಾಗದಿಂದ ಪರೀಕ್ಷೆ ಬರೆದ 287 ವಿದ್ಯಾರ್ಥಿಗಳಲ್ಲಿ 266 ಮಂದಿ ಉತ್ತೀರ್ಣರಾಗಿದ್ದಾರೆ. ಅಂತೆಯೇ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 149 ವಿದ್ಯಾರ್ಥಿಗಳ ಪೈಕಿ 137 ಮಂದಿ ಶೇ. 91.9 ಹಾಗೂ ಕಲಾ ವಿಭಾಗದಲ್ಲಿ 51 ವಿದ್ಯಾರ್ಥಿಗಳಲ್ಲಿ 44 ಮಂದಿ ಶೇ. 86.3 ತೇರ್ಗಡೆಯಾಗುವ ಮೂಲಕ ಉತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇನ್ನು ವಿಜ್ಞಾನ ವಿಭಾಗದಲ್ಲಿ ಚೇತನಾ ವಿ.ವೈದ್ಯ ಶೇ. 98.00 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಸಾರಾ ಸುದಾಮ್ ನಾಯ್ಕ್ (ಶೇ. 97.33) ದ್ವಿತೀಯ ಹಾಗೂ ಸಮ್ಮಿತ್ ಸುರೇಂದ್ರ ಬಾಗಲಕೋಟೆ (ಶೇ. 96.83) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಸಾಕ್ಷಿ ವಿನೋದ್ ನಾಯ್ಕ್ 585 ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದರೆ, ಸೌಜನ್ಯ ವಿನೋದ್ ನಾಯ್ಕ್ 578 ಅಂಕ ಮತ್ತು ವೇಧಾ ದೀಪಕ್ ನಾಯ್ಕ್ 558 ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಅಲಂಕರಿಸಿದ್ದಾರೆ.ಇನ್ನು ವಾಣಿಜ್ಯ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಅನ್ನಪೂರ್ಣ ನಾಗರಾಜ್ ಶೇಟ್ 572 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ. ರೇಣುಕಾ ಉದಯ್ ನಗೆಕರ್ 565 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ನತಾಶಾ ಬೆನಿಟೊ ನಾಥ್ 563 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.