ಜಿ. ಸೋಮಶೇಖರ

ಕೊಟ್ಟೂರು: ಸತತವಾಗಿ 11 ವರ್ಷಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿಯ ಇಂದು ಕಾಲೇಜು ರಾಜ್ಯಕ್ಕೆ ಮೊದಲ ರ‍್ಯಾಂಕ್‌ (ಟಾಪರ್) ಸ್ಥಾನ ಪಡೆಯುತ್ತಿದೆ!

2026ರಲ್ಲಿಯೂ ಈ ಪರಂಪರೆ ಮುಂದುವರಿದಿದ್ದು, ಇಂದು ಪದವಿಪೂರ್ವ ಕಾಲೇಜಿನ ಅರ್ಚನಾ ಡಿ.ಎಂ. ಮತ್ತು ಸಂಗೀತಾ 600ಕ್ಕೆ 598 ಅಂಕಗಳನ್ನು ಪಡೆದು ರಾಜ್ಯದ ಕಲಾ ವಿಭಾಗದಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಮೊದಲ 10 ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಇದಲ್ಲದೇ ವಾಣಿಜ್ಯ ವಿಭಾಗದಲ್ಲಿ ಇಬ್ಬರು ಹಾಗೂ ವಿಜ್ಞಾನ ವಿಭಾಗದಲ್ಲೂ ಓರ್ವ ವಿದ್ಯಾರ್ಥಿನಿ ರ‍್ಯಾಂಕ್‌ ಪಡೆದಿದ್ದಾರೆ.

2015ರಿಂದ 2026ರ ವರೆಗೆ ಈ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ದ್ವಿತೀಯ ಪಿಯುಸಿ ರ‍್ಯಾಂಕ್‌ ಪಟ್ಟಿಯಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದೆ.

ಜಿ.ಕೆ. ಸಹನಾ, ಸಾಕ್ಷಿ 5ನೇ ರ‍್ಯಾಂಕ್, ದೀಪಾ, ಗೋದಾವರಿ, ಹರ್ಷಿಯಾ, ಎಂ.ಎಸ್. ರಕ್ಷಿತಾ 6ನೇ ರ‍್ಯಾಂಕ್, ಆರ್. ಸ್ವಾತಿ 7ನೇ ರ‍್ಯಾಂಕ್, ಎಸ್. ಬಿಂದು, ನಯನಾ ಎಚ್.ಕೆ., ನಿಕೇತನ 8ನೇ ರ‍್ಯಾಂಕ್, ಸೌಮ್ಯಾ, ಅಂದಪ್ಪ, ಭಾಗ್ಯಶ್ರೀ, ಕೀರ್ತಿ, ಮೋಟಮ್ಮನವರ ಸಂಜನಾ, ನಿರ್ಮಲಾ, ಪಿ.ವಿ. ಶ್ರೀನಿಧಿ, ವಿಶಾಲ ಲಮಾಣಿ 9ನೇ ರ‍್ಯಾಂಕ್, ಕವಿತಾ ಅಂಗಡಿ, ಸುಮಿತ್ರಾ, ಮಹಾಂತಗೌಡ 10ನೇ ರ‍್ಯಾಂಕ್ ಗಳಿಸಿದ್ದಾರೆ.


ಇಂದು ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಭುವನೇಶ್ವರಿ ಸಿ. ಮತ್ತು ತಿರುಮಲ ತಲಾ ಶೇ. 92 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸುಪ್ರಿಯಾ 589 ಅಂಕಗಳನ್ನು ಪಡೆದು 12ನೇ ರ‍್ಯಾಂಕ್ ಪಡೆದರು.

ಖುಷಿ ತಂದಿದೆ: ಇಂದು ಪದವಿಪೂರ್ವ ಮಹಾವಿದ್ಯಾಲಯ ಕಳೆದ 11 ವರ್ಷಗಳಿಂದ ಸತತ ಮೊದಲನೇ ರ‍್ಯಾಂಕ್‌ ಪಡೆಯುತ್ತಿದೆ. ಈ ಸಾಧನೆ ನಮಗೆ ಉತ್ತೇಜನ ನೀಡಿದೆ. ಈ ವರ್ಷವೂ ರ‍್ಯಾಂಕ್‌ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರಂತೆ ಫಲಿತಾಂಶ ಬಂದಿರುವುದು ಖುಷಿ ತಂದಿದೆ. ಇದಕ್ಕೆ ಕಾಲೇಜಿನಲ್ಲಿನ ಅಧ್ಯಾಪಕ ವರ್ಗದವರ ಟೀಮ್ ವರ್ಕ್‌ ಕಾರಣ ಎಂದು ಇಂದು ಪದವಿ ಪೂರ್ವ ಕಾಲೇಜು ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ ಹೇಳುತ್ತಾರೆ.

ದೇವರ ಗುಡಿ: ಇಂದು ಕಾಲೇಜ್ ಪ್ರತಿ ವರ್ಷ ರ‍್ಯಾಂಕ್‌ ಪಡೆಯುತ್ತ ಮುಂದೆ ಸಾಗಿರುವುದು ನಮ್ಮಂತಹ ಪೋಷಕರಿಗೆ ಪ್ರೇರಣೆಯಾಗಿದೆ. ಮಗಳು ಅರ್ಚನಾ ಈ ಬಾರಿಯ ಕಲಾ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದಾಳೆ. ನಮ್ಮ ಕುಟುಂಬದ ಮಕ್ಕಳು ಈ ಕಾಲೇಜಿನಲ್ಲಿ ಈ ಹಿಂದೆ ಓದಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಒಬ್ಬರು ಕಂದಾಯ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದಾರೆ. ಈ ಕಾಲೇಜ್ ನಮ್ಮ ಪಾಲಿಗೆ ದೇವರ ಗುಡಿಯಾಗಿದೆ ಎಂದು ರ‍್ಯಾಂಕ್‌ ವಿಜೇತೆ ಅರ್ಚನಾ ತಂದೆ ಹನುಮಂತಪ್ಪ ದೊಡ್ಡಮನೆ ಹೇಳುತ್ತಾರೆ.