ನಗರಸಭೆ ನಿರ್ಲಕ್ಷದಿಂದ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಕಸದ ಬೆಟ್ಟಗುರುಶಾಂತ ಜಡೆಹಿರೇಮಠಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇದ್ದೂ ಇಲ್ಲದಂತಾಗಿದ್ದು, ಕಸದ ರಾಶಿ ವೈಜ್ಞಾನಿಕವಾಗಿ ವಿಲೇವಾರಿ ಆಗದೆ ಗುಡ್ಡೆಯಾಗಿ ಬಿದ್ದಿದೆ. ಇದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿ ದಿನ ನಗರದಿಂದ ಸಾಗಿಸುವ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸಿ ಸಂಸ್ಕರಿಸದ ಪರಿಣಾಮ ಇದೀಗ ಇಡೀ ಘಟಕವೇ ಕಸದ ಬೆಟ್ಟದಂತಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ಅಲ್ಲಿರುವ ಸುತ್ತಮುತ್ತಲಿನ ಮನೆಗಳಿಗೆ ಮತ್ತು ರಸ್ತೆವರೆಗೂ ಹಬ್ಬಿದೆ.
ಇನ್ನು ಕಷ್ಟವೆಂದರೆ ಪ್ರತಿದಿನ ಈ ಘಟಕದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮನೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ದುರ್ವಾಸನೆ ತೀವ್ರವಾಗುತ್ತಿದೆ. ಇದರಿಂದಾಗಿ ಆ ಮನೆಯವರು ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಂಡೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿಗಳ ನಡುವೆ ಅಲೆದಾಡುವ ನಾಯಿ, ಮಂಗಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಅಲ್ಲಿನ ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಹೆಚ್ಚಾಗುತ್ತಿದೆ.ನಗರದ 31 ವಾರ್ಡ್‌ಗಳ ಮನೆಗಳಿಂದ ಸಂಗ್ರಹಿಸುವ ಕಸ, ವ್ಯಾಪಾರ ಮಳಿಗೆಗಳ ತ್ಯಾಜ್ಯ, ಹೋಟೆಲ್‌ಗಳ ಉಳಿಕೆ ಆಹಾರ, ಪ್ಲಾಸ್ಟಿಕ್ ಹಾಗೂ ಇತರ ಒಣ ತ್ಯಾಜ್ಯವನ್ನು ಈ ಘಟಕಕ್ಕೆ ಪ್ರತಿದಿನ ತರಲಾಗುತ್ತಿದೆ. ಆದರೆ ಕಳೆದ ಹಲವಾರು ದಿನಗಳಿಂದ ಕಸ ವಿಂಗಡಣೆ ಮತ್ತು ಸಂಸ್ಕರಣಾ ಪ್ರಕ್ರಿಯೆ ಸರಿಯಾಗಿ ನಡೆಯದೆ ಕಸದ ಗುಡ್ಡೆಗಳು ಎತ್ತರವಾಗಿ ಕಟ್ಟೆ ಬಿದ್ದಿವೆ. ಮಳೆಯಾಗಿ ಮಳೆ ನೀರು ತ್ಯಾಜ್ಯದಲ್ಲಿ ಸೇರಿ ಕೊಳಚೆ ನೀರು ಹೊರಹರಿಯುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಕಸವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಕಸದಿಂದ ರಸ ತೆಗೆದು ಲಾಭ ಮಾಡಿಕೊಳ್ಳುವ ಯೋಜನೆ ಇಲ್ಲಿ ಸಂಪೂರ್ಣ ವಿಫಲವಾಗಿದೆ. ವಿಲೇವಾರಿ ಘಟಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಬಳಸುವ ಯಂತ್ರೋಪಕರಣಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಕೆಲವು ಯಂತ್ರಗಳು ನಿಂತಿರುವುದರಿಂದ ಕಸದ ವಿಂಗಡಣೆಯಾಗುತ್ತಿಲ್ಲ. ಜೊತೆಗೆ ಸಿಬ್ಬಂದಿ ಕೊರತೆ, ವಾಹನಗಳ ವಿಳಂಬ ಹಾಗೂ ನಿರ್ವಹಣಾ ಲೋಪವೂ ಸಮಸ್ಯೆಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಗರಸಭೆಯ ಯಾವುದೇ ಅಧಿಕಾರಿಗಳು ಉಪಸ್ಥಿತರಿದ್ದು ನಿರ್ವಹಣೆ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಸಾರ್ವಜನಿಕರು ದೂರುತ್ತಿದ್ದಾರೆ. ನಗರಸಭೆಯವರು ಪ್ರತಿವರ್ಷ ಮನೆಮನೆ ಕಸ ತಗೆದುಕೊಳ್ಳುವುದಕ್ಕಾಗಿ ಜನರಿಂದ ಕಸ ಎತ್ತುವ ತೆರಿಗೆ ವಸೂಲಿ ಮಾಡುತ್ತಾರೆ. ಪ್ರತಿ ತಿಂಗಳು ಸಿಬ್ಬಂದಿ ವೇತನ ಹಾಗೂ ಘಟಕದ ನಿರ್ವಹಣೆ ಹೆಸರಲ್ಲಿ ಹಣ ಸುರಿಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ನಿರ್ವಹಣೆಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದರು ಕೂಡ ಕಸ ಮಾತ್ರ ವಿಲೇವಾರಿಯಾಗದೆ ಹಾಗೆ ಉಳಿದಿದೆ.
ನಗರಸಭೆಯ ಅಧಿಕಾರಿಗಳು ಇತ್ತಕಡೆ ಸ್ವಲ್ಪ ಗಮನಹರಿಸಿ, ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಕಸದ ರಾಶಿ ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು. ದೈನಂದಿನ ತ್ಯಾಜ್ಯ ವಿಂಗಡಣೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ನಗರದ ಸ್ವಚ್ಛತೆಗಾಗಿ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ದಾಂಡೇಲಿ ನಗರ ಮತ್ತು ದಾಂಡೇಲಿ ತಾಲೂಕಿನ ಗ್ರಾಪಂ ವ್ಯಾಪ್ತಿಗಳಲ್ಲಿ 3 ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಶಾಸಕರು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಿದೆ.ಕಸವನ್ನ ಬೇರ್ಪಡಿಸುವ ಕೆಲಸ ಆಗಬೇಕಾಗಿದೆ. ಮನೆಮನೆ ಕಸ ಕೊಡುವವರು ಬೇರ್ಪಡಿಸಿ ಕೊಡುತ್ತಿಲ್ಲ. ಸಂಗ್ರಹಿಸಿದ ಕಸವನ್ನ ಬೇರ್ಪಡಿಸುವ ಕಾರ್ಯಕ್ಕೆ ಕಾರ್ಮಿಕರನ್ನು ಹಚ್ಚಿದ್ದೇವೆ. ಇರುವ ಘಟಕದಲ್ಲಿ ಎಲ್ಲ ತ್ಯಾಜ್ಯ ನುರಿಸುವುದು ಅಸಾಧ್ಯ. ಹೆಚ್ಚಿನ ಕಸ ಇರುವುದನ್ನು ಸರಕಾರದ ಗಮನಕ್ಕೆ ತಂದಿದ್ದು, ಸರಕಾರದಿಂದ ಕೂಡ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಅನುಮೊದನೆ ಬಂದಿದೆ. ಕಾರ್ಮಿಕರನ್ನು ಹಚ್ಚಿ ತ್ಯಾಜ್ಯ ಬೇರ್ಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗನೆ ಕಸ ನಿರ್ವಹಣೆ ಮಾಡಿಸುತ್ತೇವೆ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ.