ಧಾರವಾಡ:
ಬಸವ ಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಬಳಿ ಇರುವ ಹಡಪದ ಅಪ್ಪಣ್ಣನವರ ಅರಿವಿನಿ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿ ಪುನಃ ಪ್ರತಿಷ್ಠಾಪನೆ ಮಾಡುವಂತೆ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ವಿಶ್ವಗುರು ಬಸವಣ್ಣನವರ ಸಾಂಸ್ಕೃತಿಕ ಗುಹೆ ಪಕ್ಕದಲ್ಲಿಯೇ ಅವರ ಆಪ್ತಕಾರ್ಯದರ್ಶಿ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗುಹೆಯೂ ಅಸ್ತಿತ್ವದಲ್ಲಿದೆ. ಬಸವಣ್ಣನವರ ಜೀವನದ ಅಂತ್ಯದ ವರೆಗೆ ಅವರ ಜತೆಗೆ ಇದ್ದಂಥವರು ಅಪ್ಪಣ್ಣರು. ಆದರೆ, ಅವರ ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿ ಅಕ್ರಮವಾಗಿ ಹಸ್ತಕ್ಷೇಪ ಮಾಡಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಖೇದನೀಯ ಸಂಗತಿ ಎಂದು ಪ್ರತಿಭಟನಾಕರು ಬೇಸರ ವ್ಯಕ್ತಪಡಿಸಿದರು.
ಇದರಿಂದ ಸಮುದಾಯಕ್ಕೆ ನೋವುಂಟಾಗಿದೆ. ಶರಣರ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ. ಅಲ್ಲದೇ ಬಸವಕಲ್ಯಾಣದ ಅಭಿವೃದ್ಧಿ ಪ್ರಾಧಿಕಾರ ಅಪ್ಪಣ್ಣನವರ ಅರಿವಿನ ಗುಹೆ ಮುಂದೆ ಹಾಕಿದ್ದ ನಾಮಫಲಕ ಸಹ ಕಿತ್ತು ಹಾಕಿದ್ದಾರೆ. ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಕುರಿತು ಸಮಾಜದ ಮುಖಂಡರು, ಭಕ್ತರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಭಟನೆ ಸಹ ನಡೆಸಲಾಗಿದೆ. ಆದರೂ ನ್ಯಾಯ ದೊರಕಿಲ್ಲ. ಇನ್ಮುಂದೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಾಜದ ಆತ್ಮಾನಂದ ಹಡಪದ, ಸಿದ್ದಪ್ಪ ನವಲಗುಂದ, ಚಿದಾನಂದ ಹಡಪದ, ರವಿರಾಜ ಹಡಪದ, ಮಹದೇವಪ್ಪ ಹೊಸಮನಿ, ಕರಬಸಪ್ಪ ಹಡಪದ ಹಾಗೂ ಕಲ್ಲಪ್ಪ ಹಡಪದ ಎಚ್ಚರಿಸಿದರು.