ಸಂಭ್ರಮ ಸಡಗರದಿಂದ ಮುಕ್ತಾಯಗೊಂಡ ಕಾವೇರಿ ಕಲೋತ್ಸವ

| Published : Jan 15 2025, 12:46 AM IST

ಸಂಭ್ರಮ ಸಡಗರದಿಂದ ಮುಕ್ತಾಯಗೊಂಡ ಕಾವೇರಿ ಕಲೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ತಾಂತ್ರಿಕ ಮತ್ತು ವೇಗದ ಬದುಕಿಗೆ ಅಂಟಿಕೊಂಡ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಲೇಖಕ ಡಾ. ಮಹಾದೇವಸ್ವಾಮಿ ಹೆಗ್ಗಟ್ಟೂರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಂದಿನ ತಾಂತ್ರಿಕ ಮತ್ತು ವೇಗದ ಬದುಕಿಗೆ ಅಂಟಿಕೊಂಡ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಹುಣಸೂರು ರತ್ನಪುರಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ಮತ್ತು ಲೇಖಕ ಡಾ. ಮಹಾದೇವಸ್ವಾಮಿ ಹೆಗ್ಗಟ್ಟೂರ ಅಭಿಪ್ರಾಯಪಟ್ಟರು.

ಶನಿವಾರಸಂತೆ ಪ್ರಜ್ವಲ್ ಎಜುಕೇಶನ್ ಟ್ರಸ್ಟ್ ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ.ಪೂ.ಕಾಲೇಜಿನ 2024-23ನೇ ಸಾಲಿನ ವಾರ್ಷಿಕ ಕಲೋತ್ಸವ ಕಾರ್ಯಕ್ರಮ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಹೆಚ್ಚಾಗಿ ನಗರ ಪ್ರದೇಶದವರು ವೇಗದ ಬದುಕಿಗೆ ಹೊಂದಿಕೊಂಡು ತಾನು ಯಾವ ಲೋಕದಲ್ಲಿದ್ದೇನೆ ಯಾವ ಪರಿಸರದಲ್ಲಿ ಬದುಕುತ್ತಿದ್ದೇನೆ ಎಂಬ ಗೊಂದಲದಲ್ಲಿ ಜೀವನ ನಡೆಸುತ್ತಿರುವ ಜೊತೆಯಲ್ಲಿ ತಮ್ಮ ಮಕ್ಕಳನ್ನು ಗೊಂದಲದಲ್ಲೆ ಬೆಳೆಸುತ್ತಿದ್ದಾರೆ ಮತ್ತು ಹಿಂದಿನ ಕಾಲದ ಜೀವನದ ಮೌಲ್ಯವನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೆ ಸಾಧನೆ ಮಾಡಿದರೂ ತಾನು ಹುಟ್ಟಿದ ಊರು, ಜನ್ಮಕೊಟ್ಟ ತಂದೆ-ತಾಯಿಯ ತ್ಯಾಗವನ್ನು ಮರೆಯಬಾರದು ತವರೂರಿನ ಬಗ್ಗೆ ಭಾವನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕು ಎಂದರು.

ಕೊಡಗು ಪವಿತ್ರ ಭೂಮಿಯಾಗಿದ್ದು ಉತ್ತಮ ಪರಿಸರದಲ್ಲಿ ಜನರು ಉತ್ತಮ ಜೀವನ ನಡೆಸುತ್ತಿದ್ದಾರೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೊಡಗಿನಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡೆದುಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳು ಮುಂದೆ ರಾಜ್ಯಕ್ಕೆ ಯಾವುದೆ ಕ್ಷೇತ್ರದ ಮೂಲಕ ಕೊಡುಗೆ ನೀಡುವಂತೆ ಸಲಹೆ ನೀಡಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಂ.ಹೂವಯ್ಯ ಮಾತನಾಡಿ, ನಮ್ಮ ವಿದ್ಯಾಸಂಸ್ಥೆ ಕೇವಲ ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡದೆ ಸಾಂಸ್ಕೃತಿಕ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದೆ. ಈ ದಿಸೆಯಲ್ಲಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಸರ್ಕಾರಿ ವಲಯದಲ್ಲಿ ಅಧಿಕಾರಿಗಳಾಗಿ, ಕ್ರೀಡಾ ಕ್ಷೇತ್ರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ನಮ್ಮ ವಿದ್ಯಾಸಂಸ್ಥೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ನಮ್ಮ ವಿದ್ಯಾಸಂಸ್ಥೆಯ ಪೋಷಕರ ಸಹಕಾರ ಪ್ರೋತ್ಸಾಹದಿಂದ ವಿದ್ಯಾಸಂಸ್ಥೆ ಬೆಳೆಯಲು ಕಾರಣವಾಗಿದೆ ಎಂದರು.

ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಮಾತನಾಡಿ, ವಿದ್ಯಾರ್ಥಿ, ಶಿಕ್ಷಕರು, ಪೋಷಕರ ಪ್ರೋತ್ಸಾಹ ಮತ್ತು ಸಹಕಾರದಿಂದ ಶಿಕ್ಷಣ ಸಂಸ್ಥೆ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಂತೆ ಸಲಹೆ ನೀಡಿದರು.

ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಎನ್.ದೇವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಎಲ್.ಖಾನರಾಮ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ, ವಿದ್ಯಾಸಂಸ್ಥೆ ಟ್ರಸ್ಟಿ ಜಿ.ವಿ.ತಿಮ್ಮಪ್ಪ, ವಿದ್ಯಾಸಂಸ್ಥೆ ನಿರ್ದೇಶಕಿ ಪ್ರೀತಿ ದೇವರಾಜ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಅಶ್ವಥ್, ಗೌಡಳ್ಳಿ ಶಾಲೆಯ ದೈಹಿಕ ಶಿಕ್ಷಕ ಪ್ರವೀಣ್ ಮುಂತಾದವರಿದ್ದರು. ಈ ಸಂದರ್ಭ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಮತ್ತು ವಕೀಲ ನಿತೀಶ್ ಹಾಗೂ ಹಳೆಯ ವಿದ್ಯಾರ್ಥಿನಿ ಮತ್ತು ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಯಶಸ್ವಿನಿ ಇವರುಗಳನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.