ಬಾಲಗಂಗಾಧರನಾಥ ಶ್ರೀಗಳು ಅಪ್ರತಿಮ ಕಾಯಕ ಯೋಗಿ

| Published : Jan 15 2025, 12:46 AM IST

ಸಾರಾಂಶ

ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ನಾಡು ಕಂಡ ಅಪ್ರತಿಮ ಕಾಯಕ ಯೋಗಿ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್ ಅನಂತ್ ಕುಮಾರ್‌ ತಿಳಿಸಿದರು. ಭೈರವ ಯುವಕ ಸಂಘ ಹಾಗೂ ಶ್ರೀ ಮಠದ ಸದ್ಭಕ್ತರ ಶ್ರದ್ಧಾಭಕ್ತಿಯಿಂದ ನಡೆದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಹನ್ನೆರಡನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ನಾಡು ಕಂಡ ಅಪ್ರತಿಮ ಕಾಯಕ ಯೋಗಿ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್ ಅನಂತ್ ಕುಮಾರ್‌ ತಿಳಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಭೈರವ ಯುವಕ ಸಂಘ ಹಾಗೂ ಶ್ರೀ ಮಠದ ಸದ್ಭಕ್ತರ ಶ್ರದ್ಧಾಭಕ್ತಿಯಿಂದ ನಡೆದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಹನ್ನೆರಡನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶ್ರೀಗಳು ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರವನ್ನು ತಮ್ಮ ಮೂಲ ಮಂತ್ರವಾಗಿಸಿಕೊಂಡು ರೈತರಿಗೆ, ದೀನರಿಗೆ, ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ ಎಂದರು.

ನಗರಸಭೆ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು ಈ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಯನ್ನೇ ಉಂಟು ಮಾಡಿದರು. ಈಗ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಅಗೋಚರ ಶಕ್ತಿ ನಮ್ಮನ್ನೆಲ್ಲಾ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ನಡೆಸಲು ಪ್ರೇರಕ ಶಕ್ತಿಯಾಗಿದೆ. ಇಂತಹ ಮಾಹನ್ ಸಂತರನ್ನು ಕಣ್ಣರೇ ಕಂಡ ನಮ್ಮ ಜೀವನವೇ ಸಾರ್ಥಕವೆಂದು ನುಡಿದರು.

ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಮಾತನಾಡಿ, ಸರ್ಕಾರಗಳಿಂದಲೂ ಮಾಡಲು ಸಾಧ್ಯವಾಗದ ಗ್ರಾಮಗಳಲ್ಲಿ ಸ್ವಾಮೀಜಿ ಶಾಲೆ, ಆಸ್ಪತ್ರೆಗಳನ್ನು ಪ್ರಾರಂಭಿಸುವ ಮೂಲಕ ಬಡವರ್ಗದ ಜನರ ಬದುಕಿಗೆ ಆಶಾಕಿರಣವಾಗಿ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ರೂಪಿಸಿದ ಕೀರ್ತಿ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್ ರಾಘವೇಂದ್ರ, ನಗರಸಭಾ ಆಯುಕ್ತ ಕೃಷ್ಣಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಗಿರೀಶ್, ನಗರಸಭಾ ಸದಸ್ಯರಾದ ದರ್ಶನ್, ರಮೇಶ್ ಒಕ್ಕಲಿಗರ ಸಂಘದ ಗುಂಡಣ್ಣ, ನರಸಿಂಹಮೂರ್ತಿ ಕರವೇ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ನಗರ ಅಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಭೈರವ ಯುವಕ ಸಂಘದ ಪ್ರಶಾಂತ್, ಗಣೇಶ್, ರವಿ,ಅರುಣ, ದಿನೇಶ್, ಮಂಜು, ಕೃಷ್ಣ, ಲೋಕೇಶ್, ರಾಘು, ಮೂರ್ತಿ ಮುಂತಾದವರಿದ್ದರು. ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.