ಕೆಂಪೇಗೌಡರ ದೂರದೃಷ್ಟಿ ಸರ್ವರಿಗೂ ಮಾದರಿ

| Published : Jun 29 2025, 01:32 AM IST

ಸಾರಾಂಶ

ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿರುವ ನಗರವಾಗಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿ ಸರ್ವರಿಗೂ ಮಾದರಿ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿರುವ ನಗರವಾಗಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿ ಸರ್ವರಿಗೂ ಮಾದರಿ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಆಡಳಿತಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ನಡೆದ ಕೆಂಪೇಗೌಡರ 516ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

450 ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಲು ಬುನಾದಿ ಹಾಕಿದ ಅವರ ಯೋಚನೆ ಪ್ರಶಂಸನೀಯ. ತಾಲೂಕು ಆಡಳಿತದ ವತಿಯಿಂದ ಸರಳವಾಗಿ ನಾಡಪ್ರಭುಗಳ ಜಯಂತಿ ಆಚರಣೆ ಮಾಡಲಾಗಿದ್ದು, ಜು. 11ರಂದು ತಾಲೂಕು ಒಕ್ಕಲಿಗರ ಸಂಘ ಮತ್ತು ಇತರ ಸಮುದಾಯದ ಸಹಕಾರದೊಂದಿಗೆ ನಡೆಯುವ ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಕೆ.ಆರ್.ನಗರ ಪಟ್ಟಣದ ಪ್ರಮುಖ ಸ್ಥಳದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲು ಭರವಸೆ ನೀಡಿದ ಅವರು, 11ರಂದು ಅದ್ದೂರಿ ಜಯಂತಿ ಕಾರ್ಯಕ್ರಮ ಆಚರಿಸುವುದಕ್ಕಿಂತ ಮುಂಚೆ ಪೂರ್ವಭಾವಿ ಸಭೆ ಕರೆದು ಎಲ್ಲರ ವಿಶ್ವಾಸ ಗಳಿಸಿ ಉತ್ತಮ ಕಾರ್ಯಕ್ರಮ ಮಾಡುವಂತೆ ಒಕ್ಕಲಿಗ ಸಂಘದವರಿಗೆ ಕಿವಿಮಾತು ಹೇಳಿದರು.

ಕೆರಳಿದ ಶಾಸಕರು - ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳ ವಿರುದ್ದ ಕೆರಳಿದ ಶಾಸಕರು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಹಾಜರಾತಿ ಪಡೆದು ಬಾರದವರ ಪಟ್ಟಿಯನ್ನು ನೀಡಬೇಕೆಂದು ತಹಸೀಲ್ದಾರ್‌ಅವರಿಗೆ ತಿಳಿಸಿದರು.

ಕರ್ತವ್ಯ ಲೋಪವೆಸಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಎಚ್ಚರಿಕೆ ನೀಡಿದರು.

ಜು. 11ರಂದು ಶುಕ್ರವಾರ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳ ಸಾನಿಧ್ಯದಲ್ಲಿ ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲು ದಿನಾಂಕ ನಿಗದಿ ಪಡಿಸಲಾಗಿದ್ದು, ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೋರಿದರು.

ಉಪನ್ಯಾಸಕ ಕೃಷ್ಣ ನಾಡಪ್ರಭು ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಒಕ್ಕಲಿಗ ಸಮಾಜದ ಮುಖಂಡರಾದ ಎಸ್.ಪಿ. ತಮ್ಮಯ್ಯ, ಎಂ.ಜೆ. ಕುಮಾರ್, ಎಚ್.ಎಚ್. ನಾಗೇಂದ್ರ, ಉದಯಶಂಕರ್ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನಿರ್ದೇಶಕ ಸೈಯದ್‌ ಜಾಬೀರ್, ಪುರಸಭೆ ಸದಸ್ಯರಾದ ಪ್ರಕಾಶ್, ಶಂಕರ್‌ ಸ್ವಾಮಿ, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ. ಪ್ರಶಾಂತ್ ಇದ್ದರು.