ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್‌ ರಾಯ್‌ ಇನ್ನಿಲ್ಲ

| Published : Nov 07 2025, 02:00 AM IST

ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್‌ ರಾಯ್‌ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಹರೀಶ್‌ ರಾಯ್‌ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕೆಜಿಎಫ್‌’, ‘ಓಂ’ ಸೇರಿ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ಪೋಷಕ ನಟ ಹರೀಶ್‌ ರಾಯ್‌ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಹಿರಿಯ ನಟನ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಹರೀಶ್‌ ರಾಯ್‌ ಅವರ ಕಿರಿಯ ಪುತ್ರನನ್ನು ತನ್ನ ಕಾರಿನೊಳಗೆ ಕರೆಸಿ ಮಾತನಾಡಿಸಿದ ಯಶ್‌ ಅವರಿಗೆ ಹಣ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

90ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹರೀಶ್‌ ಮೂಲತಃ ಉಡುಪಿಯ ಅಂಬಲಪಾಡಿಯವರು. ಅನೇಕ ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿದ್ದರು. ‘ಓಂ’ ಸಿನಿಮಾದ ಡಾನ್‌ ರಾಯ್‌ ಪಾತ್ರದಿಂದ ಗುರುತಿಸಿಕೊಂಡಿದ್ದ ಇವರು ಬಳಿಕ ತಮಿಳು ಸಿನಿಮಾಗಳಲ್ಲೂ ಮಿಂಚಿದರು. ಕನ್ನಡದಲ್ಲಿ ‘ಅಂಡರ್‌ವರ್ಲ್ಡ್‌’, ‘ಸಂಜು ವೆಡ್ಸ್‌ ಗೀತಾ’, ‘ಜೋಡಿ ಹಕ್ಕಿ’, ‘ತಾಯವ್ವ’, ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಕೆಜಿಎಫ್‌’, ‘ಕೆಜಿಎಫ್‌ 2’ ಸಿನಿಮಾಗಳಲ್ಲಿ ಹರೀಶ್‌ ರಾಯ್‌ ಚಾಚಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವಕಾಶಗಳು ಬಂದರೂ ಕ್ಯಾನ್ಸರ್‌ ಕಾರಣದಿಂದ ನಟನೆಯಿಂದ ಹೊರಗುಳಿಯಬೇಕಾಯಿತು. ಶುಕ್ರವಾರ ಹರೀಶ್‌ ರಾಯ್‌ ಅವರ ಹುಟ್ಟೂರಾದ ಉಡುಪಿಯ ಅಂಬಲಪಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಟ ತನ್ನ ಅಂಗಾಂಗ ದಾನಕ್ಕೆ ಇಚ್ಛೆ ವ್ಯಕ್ತಪಡಿಸಿದ್ದರೂ ಕ್ಯಾನ್ಸರ್‌ ಕಾರಣದಿಂದ ಅದು ಸಾಧ್ಯವಾಗಿಲ್ಲ.