ಸಾರಾಂಶ
ಚಂದ್ರಮೌಳಿ ನಿರ್ದೇಶನದಲ್ಲಿ ರಾಮ್, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ ನಟನೆಯ ‘ದಿಲ್‌ಮಾರ್’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕೆ ಮಹೇಶ್, ನಾಗರಾಜ್ ಭದ್ರಾವತಿ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ನಿರ್ದೇಶಕ ಚಂದ್ರಮೌಳಿ ಮಾತು..
ಚಂದ್ರಮೌಳಿ ನಿರ್ದೇಶನದಲ್ಲಿ ರಾಮ್, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ ನಟನೆಯ ‘ದಿಲ್‌ಮಾರ್’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕೆ ಮಹೇಶ್, ನಾಗರಾಜ್ ಭದ್ರಾವತಿ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ನಿರ್ದೇಶಕ ಚಂದ್ರಮೌಳಿ ಮಾತು..
- ದಿಲ್ ಮಾರ್ ಪ್ರೇಮ, ಹೊಡೆದಾಟದ ಕಥೆಯಾ? ಈ ಶೀರ್ಷಿಕೆ ಫ್ರೇಮ್ ಆಗಿದ್ದು ಹೇಗೆ?ನಿಜ. ಈ ಶೀರ್ಷಿಕೆಯಲ್ಲಿ ದಿಲ್ ಅನ್ನೋದು ಪ್ರೀತಿಯ ಸಂಕೇತ. ಮಾರ್ ಸಾಹಸದ ಪ್ರತೀಕ. ‘ದಿಲ್‌ಮಾರ್’ ಆ್ಯಕ್ಷನ್ ಪ್ಯಾಕ್ಡ್ ಲವ್‌ಸ್ಟೋರಿ. ಈ ಶೀರ್ಷಿಕೆ ನಮ್ಮ ಕಥೆಗೆ ಸರಿಹೊಂದುತ್ತೆ ಅನಿಸಿತು, ಜೊತೆಗೆ ಸಿನಿಮಾದ ಕಂಟೆಂಟ್‌ಗೂ ಶೀರ್ಷಿಕೆಗೂ ನೇರ ಸಂಬಂಧ ಇದೆ.
- ಪ್ರಶಾಂತ್ ನೀಲ್ ನಿಮ್ಮ ಬರವಣಿಗೆ ಮೆಚ್ಚಿದವರು. ಅವರಿಗೆ ಈ ಸಿನಿಮಾ ತೋರಿಸಿದ್ರಾ?
‘ಕೆಜಿಎಫ್’ ಸಿನಿಮಾದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನನ್ನ ಬರವಣಿಗೆ ಇಷ್ಟವಾಗಿತ್ತು. ಅವರು ನೀನು ಡೈರೆಕ್ಷನ್ ಮಾಡಬೇಕು, ಅದಕ್ಕೂ ಮೊದಲು ಶಾರ್ಟ್ ಫಿಲಂ ಮಾಡು, ನಾನು ಹೇಳಿದ ಮೇಲೆ ಡೈರೆಕ್ಷನ್‌ಗೆ ಬಾ ಅಂದಿದ್ದರು. ಅದರಂತೆ ಅವರಿಗೆ ಶಾರ್ಟ್ ಫಿಲಂ ಮಾಡಿ ತೋರಿಸಿದ್ದೆ. ಅದನ್ನು ನೋಡಿ ಅವರು ನನ್ನ ತಬ್ಬಿಕೊಂಡಿದ್ದರು. ಈ ಚಿತ್ರ ಮಾಡುವ ಪ್ರೊಸೆಸ್‌ನಲ್ಲಿದ್ದಾಗ ಸಿನಿಮಾ ತೋರಿಸಲು ತಿಳಿಸಿದ್ದರು. ಆದರೆ ಅಷ್ಟೊತ್ತಿಗೆ ಕೆಲಸ ಆಗಿರಲಿಲ್ಲ. ಈಗ ಅವರು ಬ್ಯುಸಿಯಾಗಿದ್ದಾರೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ನನ್ನ ಬಗ್ಗೆ ಒಳ್ಳೆಯ ಭಾವನೆ ಇದೆ. ಈ ಸಿನಿಮಾ ನೋಡಿ ಅಂತ ಒತ್ತಾಯ ಮಾಡಿ ಅವರ ಆ ಭಾವನೆ ಹಾಳು ಮಾಡಲು ಇಷ್ಟ ಇಲ್ಲ. ಸಿನಿಮಾ ಬಿಡುಗಡೆಯ ಬಳಿಕ ಅವರು ನೋಡುವ ವಿಶ್ವಾಸ ಇದೆ.
- ಬರಹಗಾರನಾಗಿದ್ದವರು ನಿರ್ದೇಶಕನಾದಾಗ ಸಿಕ್ಕ ಸ್ವಾತಂತ್ರ್ಯ, ಸವಾಲು?
ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಸ್ಕ್ರಿಪ್ಟ್‌ಗೆ ಕೆಲಸ ಮಾಡುವಾಗ ಬರವಣಿಗೆಯಲ್ಲಿ ಸ್ವಾತಂತ್ರ್ಯ ಇತ್ತು. ಆಮೇಲಿನ ಸಿನಿಮಾಗಳಲ್ಲಿ ಅದಿರಲಿಲ್ಲ. ನನ್ನ ಸಿನಿಮಾದಲ್ಲಿ ಮತ್ತೆ ಆ ಸ್ವಾತಂತ್ರ್ಯವನ್ನು ಫೀಲ್ ಮಾಡುತ್ತಿದ್ದೇನೆ. ಆದರೆ ಅಲ್ಲಿ ಹತ್ತು ಆ್ಯಂಗಲ್‌ನಲ್ಲಿ ಬರೆದು ಪ್ರಶಾಂತ್ ಕೈಗೆ ಸ್ಕ್ರಿಪ್ಟ್ ಕೊಟ್ಟರೆ ಕೆಲಸ ಮುಗಿಯುತ್ತಿತ್ತು. ಇಲ್ಲಿ ಬರೆದದ್ದು ಅಂದುಕೊಂಡಷ್ಟೇ ತೀವ್ರವಾಗಿ ದೃಶ್ಯರೂಪ ಪಡೆಯುವ ಹಾಗೆ ಮಾಡಬೇಕು, ಅದು ದೊಡ್ಡ ಚಾಲೆಂಜ್.
- ದಿಲ್ ಮಾರ್ ಸಿನಿಮಾದ ವಿಶೇಷತೆ?
ಇದರ ಕಥೆ ಸಿನಿಮಾದ ಹೈಲೈಟ್. ಪ್ರೇಕ್ಷಕರನ್ನು ತೀವ್ರವಾಗಿ ತಟ್ಟುವಂಥಾ ತಾಜಾ ಕಥೆ ಇದೆ. ನಾಯಕ ರಾಮ್ ಅವರ ಅಭಿನಯ, ಧ್ವನಿಯದ್ದೇ ಮತ್ತೊಂದು ತೂಕ. ಇತರ ಕಲಾವಿದರ ನಟನೆ, ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆ ಇದೆ.
- ನಿಮ್ಮ ಹಿನ್ನೆಲೆ?
ನಾನು ಬೆಂಗಳೂರಿನ ಹೊಸೂರು ಭಾಗದವನು. ನಿತ್ಯ ಹಾಲು ಕರೆದು, ಮನೆಗಳಿಗೆ ಹಾಲು ಹಾಕಿ, ಹಟ್ಟಿ ಕ್ಲೀನ್ ಮಾಡಿ ಕಾಲೇಜಿಗೆ ಹೋಗ್ತಿದ್ದೆ. ಹೈನುಗಾರಿಕೆಯಿಂದಲೇ ನಮ್ಮ ಓದು, ಬದುಕು ನಡೆಯುತ್ತಿತ್ತು. ಅಪ್ಪನಿಗೆ ಎಷ್ಟೇ ಕಷ್ಟವಾದರೂ ನನ್ನನ್ನು ಓದಿಸಿ ಐಎಎಸ್ ಆಫೀಸರ್ ಮಾಡಬೇಕು ಅನ್ನುವ ಆಸೆ ಇತ್ತು. ನಾನು ಎಂಎಸ್ಸಿ ಮಾಡಿ ಕಾಲೇಜುಗಳಲ್ಲಿ ಗೆಸ್ಟ್ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದೆ. ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೂ ತಯಾರಿ ಮಾಡುತ್ತಿದ್ದೆ. ಅಷ್ಟೊತ್ತಿಗೆ ಸಿನಿಮಾ ಹುಚ್ಚು ನನ್ನ ಬದುಕಿಗೆ ತಿರುವು ನೀಡಿತು. ಒಮ್ಮೆ ಶಾರ್ಟ್ ಮೂವಿಯಲ್ಲಿ ತೊಡಗಿಸಿಕೊಂಡಿದ್ದಾಗ ನನ್ನ ಗೆಳೆಯನನ್ನು ಉಗ್ರಂ ಟೀಮ್‌ನಿಂದ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ಗೆ ಕರೆದರು. ಅವನು ನನ್ನನ್ನು ಕಳಿಸಿದ. ತಲೆಯಲ್ಲಿ ಏನೇನೋ ಕಲ್ಪನೆ ಇಟ್ಟುಕೊಂಡು ಸಿನಿಮಾ ಸೆಟ್‌ಗೆ ಹೋದೆ. ಅಲ್ಲಿ ನೋಡಿದರೆ ನಾನು ಮಾಡಬೇಕಿದ್ದ ಕೆಲಸ ಬೇರೆಯೇ ಇತ್ತು. ಅದನ್ನು ಕಂಡು ದಿಗ್ಭ್ರಮೆಯಾಯ್ತು. ಜೊತೆಗೆ ನನ್ನ ಈ ಹೊಸ ಕೆಲಸದಿಂದ ಹಸುಗಳು, ಮನೆಯ ನಿರ್ವಹಣೆ ಎಲ್ಲದಕ್ಕೂ ಸಮಸ್ಯೆಯಾಗಿತ್ತು. ಈ ಬಗ್ಗೆ ತುಂಬ ಯೋಚಿಸಿದೆ. ನನ್ನ ಕನಸಿನಂತೆ ಸಾಧನೆ ಮಾಡಬೇಕಾದರೆ ಎಷ್ಟೇ ಕಷ್ಟವಾದರೂ ಇದೇ ದಾರಿಯಲ್ಲಿ ಹೋಗಬೇಕು ಅನ್ನುವುದು ಸ್ಪಷ್ಟವಾಯಿತು. ಹಾಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವನು ಮುಂದೆ ಪ್ರಶಾಂತ್ ನೀಲ್ ಅವರಂಥವರಿಂದ ಸಿಕ್ಕ ಬೆಂಬಲದಿಂದ ಇಲ್ಲೀವರೆಗೆ ಬಂದಿದ್ದೇನೆ. ಅಪ್ಪ ಈಗಲೂ ಸಿವಿಲ್ ಸರ್ವೀಸ್ ಎಕ್ಸಾಂ ಬರಿ ಮಗನೇ ಅಂತ ಹೇಳ್ತಾರೆ, ಆದರೆ ನನಗೆ ಆ ವಯಸ್ಸು ಮೀರಿದೆ, ಅದು ಅವರಿಗೆ ಗೊತ್ತಿಲ್ಲ!
;Resize=(690,390))
)
)


;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))