ಗುಮ್ಮಡಿ ನರಸಯ್ಯನಾಗಿ ಶಿವರಾಜ್‌ಕುಮಾರ್‌

| N/A | Published : Oct 24 2025, 02:29 PM IST

Gummadi Narasaiah

ಸಾರಾಂಶ

ಈ ದೀಪಾವಳಿ ಹಬ್ಬಕ್ಕೆ ಶಿವರಾಜ್‌ಕುಮಾರ್‌ ಅಭಿನಯದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರದ ಹೆಸರು ‘ಗುಮ್ಮಡಿ ನರಸಯ್ಯ’. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈಗಷ್ಟೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. 

 ಈ ದೀಪಾವಳಿ ಹಬ್ಬಕ್ಕೆ ಶಿವರಾಜ್‌ಕುಮಾರ್‌ ಅಭಿನಯದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರದ ಹೆಸರು ‘ಗುಮ್ಮಡಿ ನರಸಯ್ಯ’. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈಗಷ್ಟೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಗುಮ್ಮಡಿ ನರಸಯ್ಯ ಪಾತ್ರದಲ್ಲಿ ಶಿವಣ್ಣ ಅವರ ಲುಕ್ಕು ರಿವೀಲ್‌ ಆಗಿದೆ.

ತೆಲುಗಿನಲ್ಲಿ ಈಗಾಗಲೇ ‘ಚಿರು ಗೋಡವಾಲು’, ‘ಲಾವಣ್ಯ ವಿತ್‌ ಲವ್‌ ಬಾಯ್ಸ್‌’ ಚಿತ್ರಗಳಲ್ಲಿ ನಟಿಸಿರುವ ಪರಮೇಶ್ವರ್‌ ಹಿವ್ರಲೆ‌ ‘ಗುಮ್ಮಡಿ ನರಸಯ್ಯ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎನ್‌ ಸುರೇಶ್‌ ರೆಡ್ಡಿ ನಿರ್ಮಾಪಕರು. ಸದ್ಯದಲ್ಲೇ ಸಿನಿಮಾ ಶೂಟಿಂಗ್‌ ಆರಂಭಗೊಳ್ಳಲಿದೆ.

ಯಾರು ಈ ಗುಮ್ಮಡಿ ನರಸಯ್ಯ?

ನರಸಣ್ಣ ಎಂದೇ ಜನಪ್ರಿಯರಾಗಿರುವ ಗುಮ್ಮಡಿ ನರಸಯ್ಯ ಅವರು ಅವಿಭಜಿತ ಆಂಧ್ರದ ಕಮ್ಮಮ್‌ ಜಿಲ್ಲೆಯ ಟೇಕುಲಪಲ್ಲಿ ಎನ್ನುವ ಗ್ರಾಮದ ಆದಿವಾಸಿ ಸಮುದಾಯಕ್ಕೆ ಸೇರಿದವರು. ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಗುಮ್ಮಡಿ ನರಸಯ್ಯ, ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ನ್ಯೂ ಡೆಮಾಗ್ರಸಿ ಪಕ್ಷದ ಸದಸ್ಯರು. ಮುಂದೆ ಯೆಲ್ಲಾಂಡು ಕ್ಷೇತ್ರದಿಂದ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿ ಆಯ್ಕೆ ಆಗುವ ಮೂಲಕ ಐದು ಬಾರಿ ಶಾಸಕರಾದವರು.

ಎಂಎಲ್‌ಎ ಆದರೂ ಸೈಕಲ್‌ನಲ್ಲೇ ನಿತ್ಯ ಓಡಾಡುತ್ತಿದ್ದರು. ರಸ್ತೆ ಬದಿಯಲ್ಲೇ ಊಟ ಮಾಡುತ್ತಿದ್ದರು. ಸಿಮೆಂಟ್‌ ಶೀಟ್‌ನ ಮನೆಯಲ್ಲಿ ವಾಸ. ಕಳೆದ ವರ್ಷ ತಮಿಳು ನಟ, ನಿರ್ದೇಶಕ ಸಮುದ್ರಕಿಣಿ ಗುಮ್ಮಡಿ ನರಸಯ್ಯ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.

ನಮ್ಮೂರಿನ ನಾಯಕರದ್ದೂ ಚಿತ್ರವಾಗಲಿ

ಗುಮ್ಮಡಿ ನರಸಯ್ಯ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ಅವರ ಫಸ್ಟ್‌ ಲುಕ್‌ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಆದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳಿಗೂ ದಾರಿ ಮಾಡಿಕೊಟ್ಟಿದೆ. ಶಿವಣ್ಣ ಪಾತ್ರವನ್ನು ನೋಡಿದ ಬಹುತೇಕರು, ‘ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ನಾಯಕರ ಕತೆಯಲ್ಲೂ ಶಿವಣ್ಣ ನಟಿಸಲಿ. ಶಾಂತವೇರಿ ಗೋಪಾಲಗೌಡ, ಗೋಕಾಕ್‌ ಚಳವಳಿ, ನಕ್ಸಲ್‌ ಚಳವಳಿಯಲ್ಲಿ ಮೃತಪಟ್ಟ ಮೈಸೂರಿನ ಸಾಕೇತ್‌ ರಾಜನ್‌ ಅವರ ಜೀವನ ಚರಿತ್ರೆಗಳು ಸಿನಿಮಾ ಆಗಲಿ’ ಎನ್ನುತ್ತಿದ್ದಾರೆ.

 

Read more Articles on