ಸಾರಾಂಶ
ಪಿಟಿಐ ನವದೆಹಲಿ
ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಮಂಗಳವಾರ ದೆಹಲಿಯ ನೆಹರೂ ಪ್ಲೇಸ್‌ನಲ್ಲಿರುವ ಚಿತ್ರಮಂದಿರದಲ್ಲಿ ‘ಕಾಂತಾರ: ಚಾಪ್ಟರ್ 1’ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದರು. 7 ವರ್ಷದಲ್ಲಿ ಅವರು ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸಿದ್ದು ಇದೇ ಮೊದಲು.ಪತ್ನಿ ಅನಿತಾ ಕುಮಾರಸ್ವಾಮಿ, ಕನ್ನಡ ಪತ್ರಕರ್ತರು ಮತ್ತು ಕಚೇರಿ ಸಹೋದ್ಯೋಗಿಗಳೊಂದಿಗೆ ಬಂದಿದ್ದ ಕುಮಾರಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ’2018 ರಲ್ಲಿ ನನ್ನ ಮಗನ ಸಿನಿಮಾವನ್ನು ನೋಡಿದ್ದೇ ಕೊನೆ. ನಂತರ ಯಾವುದೇ ಸಿನಿಮಾ ನೋಡಿರಲಿಲ್ಲ. ಈಗಲೇ ಥಿಯೇಟರ್‌ಗೆ ಬಂದಿದ್ದು’ ಎಂದರು.‘ಒಂದು ಆಕರ್ಷಕ ಕಥೆಯನ್ನು ಯಶಸ್ವಿ ಚಿತ್ರವನ್ನಾಗಿ ಮಾಡಲು ಪ್ರಸಿದ್ಧ ನಟನ ಅಗತ್ಯವಿಲ್ಲ ಎಂಬುದನ್ನು ಕಾಂತಾರ ನಮಗೆ ನೆನಪಿಸುತ್ತದೆ. ವೀಕ್ಷಕರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡಲು ತಾಂತ್ರಿಕ ಅಂಶವನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ದಿಲ್ಲಿ ಜನರೂ ಇದನ್ನು ನೋಡುತ್ತಿದ್ದು, ಇದು ಚಿತ್ರದ ಗುಣಮಟ್ಟಕ್ಕೆ ನಿದರ್ಶನ. ಚಿತ್ರದಲ್ಲಿ ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣವಾಗಿದೆ. ಮನ ಮಿಡಿಯುವ ಅಂತಃಕರಣದ ನೈಜ ಹೂರಣವಿದೆ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣವಾಗಿದೆ. ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ’ ಎಂದರು.‘ಕನ್ನಡ ಸಿನಿಮಾ ಉದ್ಯಮದಲ್ಲಿ ಇಂತಹ ಹೆಚ್ಚಿನ ಜಾಗತಿಕ ಚಿತ್ರಗಳು ಹೊರಬರಬೇಕು. ಇದಕ್ಕಾಗಿ ನಿರ್ದೇಶಕ-ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್ ಮತ್ತು ತಂಡಕ್ಕೆ ಅಭಿನಂದನೆ’ ಎಂದು ಎಚ್‌ಡಿಕೆ ಟ್ವೀಟ್ ಕೂಡ ಮಾಡಿದ್ದಾರೆ.