ಎಚ್‌ಡಿಕೆ ಜತೆ ಚರ್ಚೆಗೆ ಡಿಕೆಶಿ ಪಂಥಾಹ್ವಾನ

| Published : Oct 01 2025, 01:00 AM IST

ಸಾರಾಂಶ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ‘ಹಿಟ್‌ ಆ್ಯಂಡ್‌ ರನ್‌’ ಮಾಡುವ ಬದಲು ಮುಖಾಮುಖಿ ಚರ್ಚೆಗೆ ಬರಲಿ. ಎಲ್ಲದಕ್ಕೂ ಕೊನೆ ಹಾಡಬೇಕಿದ್ದು, ಬಹಿರಂಗ ಚರ್ಚೆಗೆ ಮಾಧ್ಯಮಗಳೇ ಸೂಕ್ತ ವೇದಿಕೆ ಕಲ್ಪಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ‘ಹಿಟ್‌ ಆ್ಯಂಡ್‌ ರನ್‌’ ಮಾಡುವ ಬದಲು ಮುಖಾಮುಖಿ ಚರ್ಚೆಗೆ ಬರಲಿ. ಎಲ್ಲದಕ್ಕೂ ಕೊನೆ ಹಾಡಬೇಕಿದ್ದು, ಬಹಿರಂಗ ಚರ್ಚೆಗೆ ಮಾಧ್ಯಮಗಳೇ ಸೂಕ್ತ ವೇದಿಕೆ ಕಲ್ಪಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನನ್ನನ್ನು ಜೈಲಿಗೆ ಹಾಕಲು ಮೊದಲಿನಿಂದಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ನಂತರವೂ ಅದನ್ನು ಮುಂದುವರಿಸುತ್ತಿದ್ದಾರೆ. ಅದನ್ನು ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಎಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಹೇಳಿಕೆಗಳಿಗೆಲ್ಲ ಹಬ್ಬ ಮುಗಿದ ಬಳಿಕ ಉತ್ತರ ನೀಡುತ್ತೇನೆ ಎಂದರು.

ಬಹಿರಂಗ ಚರ್ಚೆಗೆ ಬರಲಿ:

ಕುಮಾರಸ್ವಾಮಿ ಕೇವಲ ಹಿಟ್‌ ಆ್ಯಂಡ್‌ ರನ್‌ ಮಾಡುವುದು ಬೇಡ. ಅವರ ಕುಟುಂಬ ನನ್ನ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸುವುದು ಹೊಸತಲ್ಲ. ಈ ಹಿಂದೆ ನನ್ನ ತಂಗಿ, ತಮ್ಮ ಸೇರಿದಂತೆ ಎಲ್ಲರ ಮೇಲೂ ಪ್ರಯತ್ನ ಮಾಡಿದ್ದರು. ಕೇಂದ್ರ ಸಚಿವರಾದ ನಂತರವೂ ಆರೋಪಗಳನ್ನು ಮುಂದುವರಿಸುತ್ತಿದ್ದಾರೆ. ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಎಂದಿದ್ದಾರೆ. ಅವರ ಆರೋಪಗಳಿಗೆಲ್ಲ ಅಂತ್ಯ ಹಾಡಬೇಕು. ಯಾವುದಾದರೂ ಮಾಧ್ಯಮ ನನ್ನ ಮತ್ತು ಕುಮಾರಸ್ವಾಮಿ ನಡುವೆ ಮುಖಾಮುಖಿ ಚರ್ಚೆಗೆ ವೇದಿಕೆ ಸೃಷ್ಟಿಸಲಿ. ಈ ಹಿಂದೆ ಸಾತನೂರಿನಲ್ಲಿ ಟಿ20 ಪಂದ್ಯ ನಡೆದಂತೆ ಈಗಲೂ ನಡೆಯಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಾನು ವಿಧಾನಸಭೆಯಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಆದರೆ, ಅವರು ಲೋಕಸಭೆಗೆ ಹೋದರು. ಅವರ ಬದಲು ಬೇರೆ ನಾಯಕರೊಂದಿಗೆ ಚರ್ಚಿಸಲು ಅವರ ಪಕ್ಷದಲ್ಲಿ ನಮಗೆ ಸರಿಸಮನಾಗುವ ನಾಯಕರಿಲ್ಲ. ಹೀಗಾಗಿ ಮಾಧ್ಯಮಗಳೇ ನಮ್ಮ ನಡುವೆ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ. ಈ ಹಿಂದೆ ಬಹಳಷ್ಟು ಬಾರಿ ಚರ್ಚೆಗೆ ಆಹ್ವಾನ ನೀಡಿದ್ದೆ. ಈಗಲೂ ಆಹ್ವಾನ ನೀಡುತ್ತಿದ್ದೇನೆ. ಅವರ ಕುಟುಂಬದ ಬಗ್ಗೆ ನನ್ನ ಬಳಿ ಇರುವ ಭಂಡಾರದಿಂದ ನಾನು ದಾಖಲೆಗಳನ್ನು ತೆಗೆದಿಡುತ್ತೇನೆ. ಅವರು ನನ್ನ ವಿರುದ್ಧ ಇರುವ ದಾಖಲೆಯನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ನೇತೃತ್ವದಲ್ಲೇ ನಿಯೋಗ ಹೋಗಲು ಸಿದ್ಧ:

ರಾಜ್ಯಕ್ಕೆ ಹೆಚ್ಚಿನ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಕುಮಾರಸ್ವಾಮಿ ನೇತೃತ್ವದಲ್ಲೇ, ಅವರ ನಾಯಕತ್ವದಲ್ಲೇ ನಿಯೋಗದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ಅವರ ಬಳಿ ಹೋಗಲು ನಾವು ಸಿದ್ಧ. ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕೆ ನಮ್ಮ ಸಹಕಾರ ಕೇಳಿದ್ದು, ಅವರು ಎಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗುತ್ತಾರೋ ಸಂಪೂರ್ಣ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ಅವರ ಮಗ ಹೇಳಿದಂತೆ ಅವರದೇ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಿದರೂ ಅನುಮತಿ ನೀಡುತ್ತೇವೆ ಎಂದರು.