ಬಸವರಾಜ ಹಿರೇಮಠ

ಧಾರವಾಡ:

ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕವು ಈ ಬಾರಿ ತೀವ್ರ ಬಿಸಿಲಿನ ಝಳಕ್ಕೆ ಬೇಯುತ್ತಿದೆ. ಕಳೆದ ವಾರದಿಂದ ಕಿತ್ತೂರು ಕರ್ನಾಟಕ ಜಿಲ್ಲೆಗಳಲ್ಲಿ ಆಗಾಗ ಮಳೆಯಾದರೂ ತಾಪಮಾನದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲದೇ ತಾಪಾಘಾತ ಮುಂದುವರಿದಿದೆ.

ಧಾರವಾಡದಲ್ಲಿ ನಿತ್ಯ 28 ಡಿಗ್ರಿ ಸೆಲ್ಸಿಯಸ್‌ನಿಂದ ದಿನ ಶುರುವಾಗುತ್ತಿದ್ದು ಮಧ್ಯಾಹ್ನ 1ರ ವೇಳೆಗೆ ಅದು 38ರಿಂದ 39 ಡಿಗ್ರಿ ವರೆಗೆ ಏರುತ್ತಿದೆ. ವಾರದ ಸರಾಸರಿ ಹವಾಮಾನದ ಗತಿ ಗಮನಿಸಿದರೆ, ವಿಜಯಪುರದಲ್ಲಿ ಬೆಳಗ್ಗೆ 8ರ ಹೊತ್ತಿಗೆ 31 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಮಧ್ಯಾಹ್ನ 3ಕ್ಕೆ ತಾಪಮಾನ 40 ಡಿಗ್ರಿ ವರೆಗೂ ಹೆಚ್ಚಾಗುತ್ತಿದೆ. ಉಳಿದಂತೆ, ಬಾಗಲಕೋಟೆಯಲ್ಲಿ 39 ಡಿಗ್ರಿ, ಗದಗದಲ್ಲಿ 38 ಡಿಗ್ರಿ ಮತ್ತು ಹಾವೇರಿಯಲ್ಲಿ 38ರಿಂದ 39 ಡಿಗ್ರಿ ಮಧ್ಯೆ ಮಧ್ಯಾಹ್ನದ ಹೊತ್ತು ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ ಮಧ್ಯಾಹ್ನದ ಹೊತ್ತು 40 ಡಿಗ್ರಿ ವರಗೆ ತಾಪಮಾನ ದಾಖಲಾಗುತ್ತಿದೆ. ಇದಕ್ಕೆ ತುಸು ವ್ಯತಿರಿಕ್ತವಾಗಿ, ಕರಾವಳಿ ಉತ್ತರ ಕನ್ನಡದಲ್ಲಿ ಕನಿಷ್ಟ 24 ಹಾಗೂ ಗರಿಷ್ಠ 34 ಡಿಗ್ರಿ ವರೆಗೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

40 ಡಿಗ್ರಿ ಮೀರಲಿದೆ:


ಭಾರತೀಯ ಹವಾಮಾನ ಇಲಾಖೆ ಎಚ್ಚರಿಸುವಂತೆ ಮೇ ತಿಂಗಳ ಆರಂಭದಲ್ಲಿ ಇನ್ನೂ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಇದು ಹಲವು ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವದು ತೀವ್ರ ಆತಂಕ ಸಂಗತಿ.

ನೆತ್ತಿ ಸುಡುವ ಬಿಸಿಲು:

ಬೆಳಗಿನ 7ರ ಹೊತ್ತಿಗೆ ಬಿಸಿಲಿನ ಶಾಖದಿಂದಲೇ ನಿತ್ಯದ ಜೀವನ ಶುರುವಾಗುತ್ತಿದೆ. 11ರ ನಂತರ ಜನರು ಹೊರ ಹೋಗದಂತೆ ಝಳವಾಗುತ್ತಿದ್ದು, ಬಿಸಿಲಿಗೆ ಹೋದವರ ನೆತ್ತಿ ಸುಡುತ್ತಿದೆ. ಬೀದಿ ವ್ಯಾಪಾರಿಗಳು ಮತ್ತು ದಿನಗೂಲಿ ಬಿಸಿಲಿನ ಹೊಡೆತಕ್ಕೆ ಮೆತ್ತಾಗುತ್ತಿದ್ದು, ಕಾರ್ಮಿಕರು ಹೆಚ್ಚು ಬೆಳಗ್ಗೆ ಹಾಗೂ ಸಂಜೆ ಹೊತ್ತು ಮಾತ್ರ ಕೆಲಸ ಮಾಡುತ್ತಿದ್ದಾರೆ. ಜತೆಗೆ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಎಳನೀರು, ನಿಂಬೆ ಪಾನಕ, ಮಜ್ಜಿಗೆ, ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳನ್ನು ಹೆಚ್ಚು ಸೇವಿಸುತ್ತಿದ್ದಾರೆ. ಜತೆಗೆ ಐಸ್‌ಕ್ರೀಮ್ ಪಾರ್ಲರ್‌ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಐಸ್‌ಕ್ರೀಮ್ ಸವಿಯುತ್ತಿದ್ದಾರೆ.

ಈ ಕ್ರಮ ಅನುಸರಿಸಿ:

ನೇರವಾಗಿ ಸೂರ್ಯನ ಶಾಖ ತಪ್ಪಿಸಿಕೊಳ್ಳಲು, ವಿಶೇಷವಾಗಿ ಮಧ್ಯಾಹ್ನ 12ರಿಂದ ಸಂಜೆ 5ರ ಮಧ್ಯೆ ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಇರುವವರು ಮನೆ ಬಿಟ್ಟು ಹೊರ ಬರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಓರಲ್ ರೀಹೈಡ್ರೇಷನ್ ಲವಣಗಳನ್ನು (ORS) ನೀಡಲಾಗುತ್ತಿದೆ. ಆದರೆ, ತೀವ್ರತರವಾದ ಪ್ರಕರಣಗಳಲ್ಲಿ ಇಂಟ್ರಾವೆನಸ್ ದ್ರವಗಳನ್ನು ನೀಡಲಾಗುತ್ತಿದೆ. ಒಂದು ಲೀಟರ್ ನೀರಿನಲ್ಲಿ ಒಆರ್‌ಎಸ್‌ ಬೆರೆಸಿ 24 ಗಂಟೆ ಒಳಗೆ ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ಎಂ. ಹೊನಕೇರಿ ಹೇಳಿದರು.

ಹೀಟ್ ಸ್ಟ್ರೋಕ್‌ನ ಲಕ್ಷಣಗಳಿದ್ದರೆ, ತಕ್ಷಣ ತಂಪಾದ, ಗಾಳಿ ಇರುವ ಪ್ರದೇಶಕ್ಕೆ ಒಯ್ಯಬೇಕು. ಬಿಗಿಯಾದ ಬಟ್ಟೆ ಧರಿಸಬಾರದು. ಮನೆಯಲ್ಲಿದ್ದಾಗ ಮಧ್ಯಾಹ್ನದ ಹೊತ್ತು ಒದ್ದೆಯಾದ ಬಟ್ಟೆ ಧರಿಸಿದರೂ ತಪ್ಪೇನಿಲ್ಲ. ಕಡ್ಡಾಯವಾಗಿ ಸ್ನಾನಕ್ಕೆ ತಣ್ಣೀರು ಬಳಿಸಿ. ಬಿಸಿಲಿನಿಂದ ಒಂದು ವೇಳೆ ತುರ್ತು ಸಂದರ್ಭಗಳಿದ್ದರೆ ವೈದ್ಯಕೀಯ ಸಹಾಯವಾಣಿ 104 ಸಂಪರ್ಕಿಸಬಹುದು ಎಂದು ಡಾ. ಹೊನಕೇರಿ ಮಾಹಿತಿ ನೀಡಿದರು.ಬಾಕ್ಸ್‌..

ಹಿಟ್‌ಸ್ಟ್ರೋಕ್‌ ಕೊಠಡಿ ಸ್ಥಾಪನೆ..

ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಶಾಖಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ತಾಪಾಘಾತ ಹೆಸರಿನಲ್ಲಿ ನಾಲ್ಕೈದು ದಿನಗಳ ಹಿಂದೆ ಹತ್ತು ಬೆಡ್‌ಗಳ ವಿಶೇಷ ವಾರ್ಡ್‌ ಸ್ಥಾಪಿಸಲಾಗಿದೆ.

ಅತಿಯಾದ ಬಿಸಿಲು, ಶಾಖದಿಂದ ಶರೀರದಲ್ಲಿ ಬದಲಾವಣೆ ಆಗುತ್ತವೆ. ಆದ್ದರಿಂದ ಈ ವಾರ್ಡ್‌ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 10 ಬೆಡ್‌ಗಳ ವ್ಯವಸ್ಥೆ ಇದೆ. ಈ ವರೆಗೆ ಇದೇ ಕಾರಣಕ್ಕಾಗಿ ಯಾರೂ ದಾಖಲಾಗಿಲ್ಲ. ಮೇ ತಿಂಗಳಲ್ಲಿ ಈ ಸಾಧ್ಯತೆ ಇದೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಎಸ್‌.ಎನ್‌. ಗಾಬಿ ಮಾಹಿತಿ ನೀಡಿದರು.