ಕನ್ನಡಪ್ರಭ ವಾರ್ತೆ ತರೀಕೆರೆ

ಜ್ಞಾನದ ಜತೆಗೆ ಅಗತ್ಯ ಕೌಶಲ್ಯವಿದ್ದಾಗ ಮಾತ್ರ ಜ್ಞಾನ ಫಲಪ್ರದವಾಗುತ್ತದೆ. ನಿರಂತರ ಪ್ರಯತ್ನ, ಆತ್ಮವಿಶ್ವಾಸ, ಪ್ರಾಯೋಗಿಕ ಕೌಶಲ್ಯವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಿ.ಎನ್.ಜಗದೀಶ್ ಹೇಳಿದರು.

ಎಸ್.ಜೆ.ಎಂ. ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಮತ್ತು ಪ್ರಥಮ ಬಿ.ಎ. ಬಿ.ಕಾಂ. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಬ್ದುಲ್ ಕಲಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು, ನನ್ನ ಗುರುಗಳೆ ನನ್ನ ಈ ಯಶಸ್ಸಿಗೆ ಸ್ಪೂರ್ತಿ.ಆದ್ದರಿಂದ ಪ್ರತಿಯಬ್ಬ ವಿದ್ಯಾರ್ಥಿಯು ಗುರುಹಿರಿಯರಲ್ಲಿ ಭಕ್ತಿ, ಶ್ರದ್ಧೆ ಹೊಂದಿ ಗುರುಗಳಲ್ಲಿರುವ ಅಪಾರ ಜ್ಞಾನಸಂಪತ್ತನ್ನು ಬಳಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಜೀವನ ಹಸನಾಗುತ್ತದೆ ಎಂದು ಹೇಳಿದರು.

ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯನ್ನು ಮನದಲ್ಲಿಟ್ಟುಕೊಂಡು ಅತ್ಯಂತ ಜಾಣ್ಮೆಯಿಂದ ಮಾತನಾಡಬೇಕು. ಸಂಸ್ಕಾರವಂತರಾಗಬೇಕು, ಜ್ಞಾನವಂತರಾಗಬೇಕು, ಆದ್ದರಿಂದ ಕಲಿಕೆ ನಿರಂತರವಾಗಿರಬೇಕು ಕಲಿಕೆ ಸೃಜನಶೀಲತೆಗೆ, ಸೃಜನಶೀಲತೆ ಚಿಂತನೆಗೆ, ಚಿಂತನೆ ಜ್ಞಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.


ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಜಿ.ಚವಾಣ್‌ ಮಾತನಾಡಿ, ಇಂದಿನ ಎ.ಐ.ತಂತ್ರಜ್ಞಾನ ಯುಗದಲ್ಲಿ ಪದವಿಯ ಜೊತೆಗೆ ಹೆಚ್ಚಿನ ಕೌಶಲ್ಯಗಳನ್ನು ಬೆಳಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಕಾಲೇಜಿನಲ್ಲಿರುವ ಉಪನ್ಯಾಸಕರು ಮತ್ತು ಗ್ರಂಥಾಲಯದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಒಕ್ಕೂಟದ ಚೇರಮನ್‌ ಡಾ.ಸದಾಶಿವನಾಯ್ಕ ಎ. ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ನಿರ್ಮಿಸುವುದೇ ಶಿಕ್ಷಣ, ಸ್ವಾಮಿ ವಿವೇಕಾನಂದರ ಪ್ರಕಾರ ಮಾನವನಲ್ಲಿ ಈಗಾಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ಹೊರತರುವುದೇ ಶಿಕ್ಷಣ ಎಂಬ ವಾಣಿಯಂತೆ ನಮ್ಮ ಮಹಾವಿದ್ಯಾಲಯವು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು ವರ್ಷ ಪೂರ್ತಿಒಂದಲ್ಲ ಒಂದು ಕಾರ್ಯಕ್ರಮಗಳು ನಮ್ಮ ಮಹಾವದ್ಯಾಲಯದಲ್ಲಿ ನಡೆಯುತ್ತಿರುತ್ತವೆ ಎಂದರು.

ಸರ್ಕಾರಿ ಬಾಲಕಿಯರ ಪದವಿಪೂರ್ವಕಾಲೇಜು ಪ್ರಾಚಾರ್ಯ ಡಿ.ಎನ್.ಜಗದೀಶ್, ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅನಂತ್‌ನಾಡಿಗ್, ವಾಣಿಜ್ಯಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡ ಡಾ.ಕೆ.ಸುಮತಿ ಹಾಗೂ ಡಾ.ವೆಂಕಟೇಶ ಆರ್. ಅವರನ್ನು ಸನ್ಮಾನಿಸಲಾಯಿತು.

ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ವೆಂಕಟೇಶ ಆರ್. ಎನ್.ಎಸ್.ಎಸ್. ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಡಾ.ಶಿವರಾಜಕುಮಾರ ಕ. ಮತ್ತು ದೈಹಿಕ ಶಿಕ್ಷಣ ನಿದೇಶಕ ಜೆ.ರಘು ಅತಿಥಿಗಳ ಪರಿಚಯ ಮಾಡಿಕೊಟ್ಟರು.

ವಾಣಿಶ್ರೀ ಎಸ್.ಪಿ ಅನು ಹೆಚ್.ಸಿ. ಅರುಣ ಪಿ.,ದೀಕ್ಷಿತ್‌ವಿ.ಎಸ್. ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ.ಸುಮತಿ ಕೆ. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ತಿಪ್ಪೇಸ್ವಾಮಿ ಸಿ. ಪ್ರಧಾನ ಕಾರ್ಯದರ್ಶಿ ಅರುಣ ಪಿ. ಸಹ ಕಾರ್ಯದರ್ಶಿ ರವೀಂದ್ರ ಎಲ್.ಎಸ್. ವಾಣಿಶ್ರೀ ಎಸ್.ಪಿ., ಅನು ಎಚ್.ಸಿ. ಅರುಣ ಪಿ.,ದೀಕ್ಷಿತ್‌ ವಿ.ಎಸ್.ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.