ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಸಂಭ್ರಮ-೨೦೨೫ ನಮ್ಮೂರ ಹಬ್ಬ ಹಾಗೂ ವಿವಿಧ ಮಳಿಗೆಗಳನ್ನು ಶುಕ್ರವಾರ ಶಾಸಕ ಶಿವರಾಮ ಹೆಬ್ಬಾರ್‌ ಉದ್ಘಾಟಿಸಿ, ಮಕ್ಕಳಿಗೆ ಬಹುಮಾನ ವಿತರಿಸಿದರು.

ಯಲ್ಲಾಪುರ: ನಮ್ಮ ಕನ್ನಡ ನಾಡು, ಭಾಷೆಯನ್ನು ನಾವು ಉಳಿಸಿಕೊಂಡು ನಮ್ಮ ಬದುಕಿಗಾಗಿ ಆಂಗ್ಲ ಶಿಕ್ಷಣ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ಪಡೆಯದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ನಮ್ಮ ಮಕ್ಕಳು ಬದುಕುವುದೇ ಕಷ್ಟವಾದೀತು. ಪ್ರತಿಯೊಬ್ಬ ಮಕ್ಕಳಿಗೂ ಆದ್ಯತೆಯ ಕ್ಷೇತ್ರ ಶಿಕ್ಷಣವಾಗಿದೆ. ತಮ್ಮ ಮಕ್ಕಳನ್ನು ಕುಟುಂಬದ, ದೇಶದ ಆಸ್ತಿಯನ್ನಾಗಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ವಿಶ್ವದರ್ಶನ ಸಂಭ್ರಮ-೨೦೨೫ ನಮ್ಮೂರ ಹಬ್ಬ ಹಾಗೂ ವಿವಿಧ ಮಳಿಗೆಗಳನ್ನು ಶುಕ್ರವಾರ ಉದ್ಘಾಟಿಸಿ, ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಂದು ವಿಶ್ವಮಟ್ಟದಲ್ಲಿ ಬರುವ ಸವಾಲನ್ನು ನಮ್ಮ ಮಕ್ಕಳು ಎದುರಿಸಬೇಕಾಗಿದೆ. ಹಾಗಾಗಿ ಜಗತ್ತಿನ ಭಾಷೆಯ ಅರಿವು ಪರಿಪೂರ್ಣವಾಗಿ ನಮ್ಮದಾಗಿಸಿಕೊಳ್ಳಬೇಕು ಎಂದ ಅವರು, ಇಡಗುಂದಿಯಂತಹ ಸಣ್ಣ ಹಳ್ಳಿಯಲ್ಲಿ ಉಮೇಶ ಭಟ್ಟ ಅವರು ಶಿಕ್ಷಣ ಸಂಸ್ಥೆ ಆರಂಭಿಸಿದರು. ಆನಂತರ ಯಲ್ಲಾಪುರದಲ್ಲಿ ಸಂಸ್ಥೆ ಪ್ರಾರಂಭಿಸಿದರು. ಸಮಾಜಕ್ಕೆ ಆದರ್ಶ ಮಕ್ಕಳನ್ನು ನೀಡುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಬೇಕಾಗಿದೆ. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಪಾಲಕರಾದ ನಾವು ಮಕ್ಕಳಲ್ಲೇ ದೇವರನ್ನು ಕಾಣಬೇಕು. ಅಮೆರಿಕದಂತಹ ದೇಶದ ಮಕ್ಕಳ ಜತೆ ನಮ್ಮ ಮಕ್ಕಳು ಸ್ಪರ್ಧಿಸಬೇಕಾಗಿದೆ. ಅಂತಹ ಉತ್ತಮ ಮಕ್ಕಳನ್ನು ಈ ಸಂಸ್ಥೆ ರೂಪಿಸುವಂತಾಗಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಸಂಸ್ಕಾರಯುತ ಶಿಕ್ಷಣದ ಜತೆ ವಿನಯ, ಸರಳತೆ, ಹಿರಿಯರನ್ನು ಗೌರವಿಸುವ ಸಂಸ್ಕಾರ ನೀಡಲಾಗುತ್ತಿದೆ. ಬಲಿಷ್ಠ ಭಾರತ ಕಟ್ಟಲು ನಮ್ಮ ಸಂಸ್ಥೆಯ ಕೊಡುಗೆ ಮಹತ್ವದ ಪಾತ್ರ ವಹಿಸುತ್ತಿದೆ. ಗಣಪತಿ ಮತ್ತು ಶಾರದಾ ಗುಡಿಯ ಜತೆ ಉಮೇಶ ಭಟ್ಟ ಅವರ ಪ್ರತಿಮೆ ಸ್ಥಾಪಿಸುವ ಚಿಂತನೆಯಲ್ಲಿದ್ದೇವೆ ಎಂದರು.ಇಡಗುಂದಿಯಲ್ಲಿ ೩೦ ಬಡವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಜತೆ ಸಂಸ್ಕಾರ, ಮೌಲ್ಯವನ್ನು ನೀಡಲಾಗುತ್ತಿದೆ. ಸಿಬಿಎಸ್‌ಇಯಲ್ಲಿ ದೇಶ ಮಟ್ಟದಲ್ಲಿ ೩ನೇ, ರಾಜ್ಯಮಟ್ಟದಲ್ಲಿ ೧ನೇ ಸ್ಥಾನ ಪಡೆಯುವಲ್ಲಿ ನಮ್ಮ ವಿದ್ಯಾರ್ಥಿಗಳು ಕಾರಣರಾಗಿದ್ದಾರೆ. ೬ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ಸಾಲಿನಿಂದ ಪಿಯು ವಸತಿ ಶಾಲೆ ಪ್ರಾರಂಭಿಸುತ್ತಿದ್ದು, ಎಂಸಿಎ ತರಗತಿಯನ್ನೂ ಪ್ರಾರಂಭಿಸಲಾಗುತ್ತಿದೆ ಎಂದರು.

ಪಿಎಸ್‌ಐ ರಾಜಶೇಖರ ವಂದಲಿ ಮಾತನಾಡಿ, ಇಂದು ಅಂಕವೇ ಪ್ರಧಾನವೆಂಬ ಭ್ರಮೆಯಲ್ಲಿ ಅನೇಕ ಪಾಲರಿದ್ದಾರೆ. ಶ್ರೇಷ್ಠ ಬದುಕಿಗೆ ಅದೊಂದೆ ಸಾಲದು. ಪಠ್ಯೇತರ, ಕ್ರೀಡಾ ಚಟುವಟಿಕೆಯೂ ಮಹತ್ವದ್ದಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಬೆಳೆದು, ಸಂಸ್ಕಾರವಂತ ಮಕ್ಕಳನ್ನು ಬೆಳೆಸಬೇಕು ಎಂದರು.

ಹಿರಿಯರಾದ ಪಿ.ಜಿ. ಭಟ್ಟ ಬರಗದ್ದೆ, ಶಂಕರ ಭಟ್ಟ ತಾರೀಮಕ್ಕಿ, ರಘುನಂದನ ಭಟ್ಟ, ವಿಘ್ನೇಶ್ವರ ಗಾಂವ್ಕರ, ವೆಂಕಟ್ರಮಣ ಬೆಳ್ಳಿ, ಮಹೇಶ ಗೌಳಿ, ನಿತ್ಯಾನಂದ ಗಾಂವ್ಕರ ಶುಭಹಾರೈಸಿ, ಬಹುಮನ ವಿತರಿಸಿದರು. ಸಿಬಿಎಸ್‌ಇ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿಬಿಎಸ್‌ಇ ಪ್ರಾಚಾರ್ಯೆ ಮಹಾದೇವಿ ಭಟ್ಟ ಸ್ವಾಗತಿಸಿದರು. ಶಿಕ್ಷಕ ಸಂಕರ್ಷಣ ಭಟ್ಟ ವರದಿ ವಾಚಿಸಿದರು. ಉಪ ಪ್ರಾಚಾರ್ಯೆ ಆಸ್ಮಾ ಶೇಖ್ ನಿರ್ವಹಿಸಿ, ವಂದಿಸಿದರು.