ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲೆಗೆ ಕೇಂದ್ರದ ಜಲಶಕ್ತಿ ಸಚಿವಾಲಯದ ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಜಲ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣಾ ಕಾಮಗಾರಿಯನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಿದ್ದರಿಂದ ಈ ಗೌರವಕ್ಕೆ ಪಾತ್ರವಾಗಿದೆ.ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಲ ಪ್ರಶಸ್ತಿ ಸಮಾರಂಭದಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಪ್ರವೀಣ್ ಬಾಗೇವಾಡಿ ಅವರಿಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯೊಂದಿಗೆ ಜಿಲ್ಲೆಗೆ ೨೫ ಲಕ್ಷ ರು. ನಗದು ಬಹುಮಾನ ದೊರಕಿದೆ.
ಜಿಲ್ಲೆಯು ನೂರಾರು ಕೆರೆಗಳ ಪುನಶ್ಚೇತನ, ರಾಜಕಾಲುವೆಗಳ ಅಭಿವೃದ್ಧಿಪಡಿಸಿದೆ. ಇದು ಅಂತರ್ಜಲ ವೃದ್ಧಿ ಮತ್ತು ಕೃಷಿಗೆ ನೀರು ಒದಗಿಸಿದ್ದು, ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.ಮುಳಬಾಗಿಲು ತಾಲೂಕಿನ ನಂಗಲಿ, ಆಲಂಗೂರು, ಅಂಗೋಂಡಹಳ್ಳಿ, ದೇವರಾಯಸಮುದ್ರ, ಮುಡಿಯನೂರು, ಕುರುಡುಮಲೆ, ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ, ಮಾಲೂರು ತಾಲೂಕಿನ ಶಿವಾರಪಟ್ಟಣ, ಕೋಲಾರ ತಾಲೂಕಿನ ವಕ್ಕಲೇರಿ ಹಾಗೂ ಬಂಗಾರಪೇಟೆ ತಾಲೂಕಿನ ಮಾವಹಳ್ಳಿ ಗ್ರಾಪಂಗಳಿಗೆ ಭೇಟಿ ನೀಡಿದ್ದ ಕೇಂದ್ರ ನೋಡಲ್ ಅಧಿಕಾರಿಗಳ ತಂಡ, ಎಂ- ನರೇಗಾ, ಜಲ ಜೀವನ್ ಮಿಷನ್, ಅಟಲ್ ಭೂಜಲ್ ಸೇರಿದಂತೆ ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿತ್ತು.
ಜಲ ಸಂಚಯ ಪೋರ್ಟಲ್‌ನಲ್ಲಿ ಕಾಮಗಾರಿ ಮಾಹಿತಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮ- ನರೇಗಾ) ಹಾಗೂ ಇತರೆ ಯೋಜನೆಗಳಡಿ ಕೋಲಾರ ಜಿಲ್ಲೆಯು ೨೦೨೪ ಏಪ್ರಿಲ್ ೧ರಿಂದ ೨೦೨೫ರ ಮಾರ್ಚ್ ೩೧ರವರೆಗೆ ಅಂದಾಜು ೮,೪೭೦ ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜಲಸಂಚಯ ಪೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು.
ಇವುಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ, ಕೊಳವೆಬಾವಿ ಮರುಪೂರ್ಣ ಪಿಟ್, ಸೋಕ್‌ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ಕಟ್ಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಕೊಯ್ಲು, ತೆರೆದ ಬಾವಿ, ನಾಲಾ ಹೂಳೆತ್ತುವುದು, ಚೆಕ್ ಡ್ಯಾಂ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರಶಸ್ತಿ ಲಭಿಸಿದೆ.ಅಭಿಯಾನದಡಿ ಯಾವ್ಯಾವ ಕಾಮಗಾರಿಗಳು:
ಕೊಳವೆಬಾವಿ ಮರುಪೂರ್ಣ, ಸಮಗ್ರ ಕೆರೆ, ಕಟ್ಟೆ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಕೊಯ್ಲು, ಚೆಕ್ ಡ್ಯಾಮ್ ಕಾಮಗಾರಿ ಅನುಷ್ಠಾನದಲ್ಲಿ ಕೋಲಾರ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ.----
ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ಜಲ ಸಂರಕ್ಷಣೆ ಹಾಗೂ ಮಳೆ ನೀರಿನ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಬಲಪಡಿಸುವುದು, ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕೋಲಾರ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ನಮ್ಮ ಈ ಪರಿಶ್ರಮಕ್ಕಾಗಿ ಪಶಸ್ತಿ ಲಭಿಸಿದೆ. ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳು ಇಲ್ಲದೆ ಇರುವುದರಿಂದ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ನೋಡಲ್ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿ ಕಾಮಗಾರಿ ಪರಿಶೀಲಿಸಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.- ಪ್ರವೀಣ್ ಬಾಗೇವಾಡಿ, ಜಿಪಂ ಸಿಇಒ, ಕೋಲಾರ.
;Resize=(128,128))
;Resize=(128,128))
;Resize=(128,128))
;Resize=(128,128))