ಕೂಡಲಸಂಗಮ ಸಮಗ್ರ ಅಭಿವೃದ್ಧಿಯ ಹರಿಕಾರ ಪಟೇಲ್‌: ಶ್ರೀಶೈಲಗೌಡ ಕಮತರ

| Published : Oct 02 2024, 01:02 AM IST

ಕೂಡಲಸಂಗಮ ಸಮಗ್ರ ಅಭಿವೃದ್ಧಿಯ ಹರಿಕಾರ ಪಟೇಲ್‌: ಶ್ರೀಶೈಲಗೌಡ ಕಮತರ
Share this Article
  • FB
  • TW
  • Linkdin
  • Email

ಸಾರಾಂಶ

ದಿ. ಜೆ.ಎಚ್. ಪಟೇಲ ತಮ್ಮ ಸಮಾಜವಾದಿ ಚಿಂತನೆಗಳಿಂದ ತಮ್ಮ ಅಧಿಕಾರಾವದಿಯಲ್ಲಿ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಕೊಂಡರು ಎಂದು ಜೆಡಿಯು ಪಕ್ಷದ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ಹೇಳಿದರು.

ಧಾರವಾಡ: ದಿ. ಜೆ.ಎಚ್. ಪಟೇಲ ಅವರು ಮಹಾನ್ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವೇಶ್ವರರ ಐಕ್ಯಸ್ಥಳ ಕೂಡಲಸಂಗಮ ಸಮಗ್ರ ಅಭಿವೃದ್ಧಿಯ ಹರಿಕಾರರು ಎಂದು ಜೆಡಿಯು ಪಕ್ಷದ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ಹೇಳಿದರು.

ದಿ. ಜೆ.ಎಚ್. ಪಟೇಲರ 95ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿಯ ಕಡಪಾ ಮೈದಾನದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. `ಸಮಾಜವಾದಿ, ರೈತ ಹಾಗೂ ವಿದ್ಯಾರ್ಥಿ ಚಳುವಳಿಯ ಮೆಲಕು ಹಾಕಿದರು. ರೈತರ ಮತ್ತು ಸರ್ವಜನಾಂಗದ ಚಿಂತಕ, ಅಪ್ಪಟ ಕನ್ನಡಪ್ರೇಮಿ, ನಾಡು-ನುಡಿಯ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಪಟೇಲರು, ಕಾನೂನು ಪದವೀಧರರು. 1967ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಸಂಸತ ಭವನದಲ್ಲಿ ಕನ್ನಡದಲ್ಲಿಯೇ ತಮ್ಮ ವಿಚಾರವನ್ನು ಮಂಡಿಸಿ ಕನ್ನಡಿಗರ ಹೃದಯ ಗೆದ್ದವರು. ಮುಂದೆ ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ, 1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಸಮಾಜವಾದಿ ಚಿಂತನೆಗಳಿಂದ ತಮ್ಮ ಅಧಿಕಾರಾವದಿಯಲ್ಲಿ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಕೊಂಡರು ಎಂದರು.ಇವರ ಸರ್ಕಾರದ ಅವಧಿಯಲ್ಲಿ ಆಡಳಿತವನ್ನು ಚುರುಕುಗೊಳಿಸಲು ಏಳು ಹೊಸ ಜಿಲ್ಲೆಗಳನ್ನು ರಚನೆ ಮಾಡಿದರು. ರೈತರ ಸುಸ್ಥಿರ ಅಭಿವೃದ್ಧಿ ಸಲುವಾಗಿ ನೀರಾವರಿ ಯೋಜನೆಗಳಾದ ಘಟಪ್ರಭಾ, ಮಲಪ್ರಭಾ, ವಿಶ್ವೇಶ್ವರಯ್ಯ ಕಾಲುವೆ ಆಧುನೀಕರಣ, ವರುಣಾ ಕಾಲುವೆ ಕಾಮಗಾರಿ, ಆಲಮಟ್ಟಿ ಕೃಷ್ಣಾ ಜಲಾಶಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟರು. ಜೊತೆಗೆ ಮಾಹಿತಿ ತಂತ್ರಜ್ಞಾನಕ್ಕೂ ಉತ್ತೇಜನ ನೀಡಿದರು. ಆದರೆ, ಎಂದಿಗೂ ದ್ವೇಷರಾಜಕಾರಣ ಮಾಡಿದವರಲ್ಲ. ತಮ್ಮ ಕಾರ್ಯಬಾಹುಳ್ಯ ಹಾಗೂ ರಾಜಕೀಯ ಒತ್ತಡಗಳ ನಡುವೆಯೂ ತಮ್ಮ ಮೊನಚಾದ ಹಾಸ್ಯಗಳಿಂದ ಮಾರ್ಮಿಕವಾಗಿ ಸಂದೇಶ ನೀಡುತ್ತಿದ್ದ ಅವರು ಸಮಾಜವಾದಿ ತತ್ವದಡಿ ಸರ್ಕಾರವನ್ನು ನಡೆಸಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದ ಧೀಮಂತರು ಎಂದರು.

ಈ ಸಂದರ್ಭದಲ್ಲಿ ಸಮಾಜವಾದಿ ಹಿರಿಯ ರೈತ ಹೋರಾಟಗಾರರಾದ ಉಪ್ಪಿನಬೇಟಗೇರಿಯ ನಿಂಗಪ್ಪ ದಿವಟಗೆ, ಕ್ಯಾರಕೊಪ್ಪ ಗ್ರಾಮದ ಅಮೃತ ಕಮ್ಮಾರ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಸ್.ಎಂ. ಕುಂದರಗಿ ಸ್ವಾಗತಿಸಿದರು. ಅಭಿಷೇಕ ಸಿದ್ಧಲಿಂಗ ದೇಸಾಯಿ ನಿರೂಪಿಸಿದರು. ಫಿರೋಜಖಾನ್‌ ಹವಾಲ್ದಾರ, ಸಂಗಮೇಶ ಐಹೋಳೆ, ನಿರ್ಮಲಾ ಹಿರೇಮಠ, ವೀರನಗೌಡ ಪಾಟೀಲ, ಕಲ್ಲಪ್ಪ ಗುಂಡಗೋವಿ, ಬಸವರಾಜ ಹಾನಗಲ್ಲ, ಹೈದರಲಿ ಬಳ್ಳಾರಿ, ಆಲಂ, ಶಂಕರ ಪೂಜಾರ, ಜಾವೇದ ಬೆಳಗಾಂವಕರ ಇದ್ದರು.