ಸಾರಾಂಶ
ಕೊಪ್ಪಳ:
ಕಾರ್ಖಾನೆ ವಿರುದ್ಧ ಕೇವಲ ಒಂದು ದಿನ ಹೋರಾಟ ಮಾಡಿ ಬಿಡುವ ಪ್ರಶ್ನೆಯೇ ಇಲ್ಲ. ಎಂಎಸ್‌ಪಿಎಲ್ ಅಥವಾ ಬಿಎಸ್‌ಪಿಎಲ್ ಕಾರ್ಖಾನೆ ಇಲ್ಲಿಂದ ತೊಲಗುವ ವರೆಗೂ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ಮಾಡೋಣ. ಒಂದೇ ವೇಳೆ ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪಿಸಿದರೆ ನಾನು ಕೊಪ್ಪಳ ತೊರೆಯುವೆ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಪರವಾಗಿ ಕಾರ್ಖಾನೆಗಳ ಹಠಾವೋ ಕೊಪ್ಪಳ ಬಚಾವೋ ಆಂದೋಲನ ಹೋರಾಟಕ್ಕೆ ಆಹ್ವಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಾನಷ್ಟೇ ಅಲ್ಲ. ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಾತ್ರೆಗೆ ಬಂದಂತೆ ಬನ್ನಿ:ಕೊಪ್ಪಳ ಮಾತ್ರವಲ್ಲದೆ ಸುತ್ತಲಿನ 30ರಿಂದ 40 ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಗಳು ಈಗಾಗಲೇ ಕಾರ್ಖಾನೆಗಳಿಂದ ಸಮಸ್ಯೆ ಎದುರಿಸುತ್ತಿವೆ. ರೈತರ ಬೆಳೆ ಬರುತ್ತಿಲ್ಲ. ಮತ್ತೆ ಕಾರ್ಖಾನೆ ಸ್ಥಾಪನೆಯಾದರೆ ಮತ್ತಷ್ಟು ಸಂಕಷ್ಟಗಳು ಎದುರಾಗುತ್ತವೆ. ಇದರ ವಿರುದ್ಧ ಹೋರಾಟ ಮಾಡಲು ಯಾರಿಗೂ ಪ್ರತ್ಯೇಕವಾಗಿ ಆಹ್ವಾನ ನೀಡುವುದಿಲ್ಲ. ಗವಿಸಿದ್ಧಪ್ಪನ ಜಾತ್ರೆಗೆ ಬಂದಂತೆ ಈ ಹೋರಾಟಕ್ಕೆ ಬರಬೇಕು ಎಂದು ಶ್ರೀಗಳು ಜನರಿಗೆ ಕರೆ ನೀಡಿದರು. ನಾನು ಇದರಲ್ಲಿ ಒಳಗೊಂದು ಹೊರಗೊಂದು ಮಾತನಾಡುವ ಪ್ರಶ್ನೆಯೇ ಇಲ್ಲ. ನಾನು ಕಾರ್ಖಾನೆಗಳ ವಿರುದ್ಧ ಮತ್ತು ಪರಿಸರ ಉಳಿಸಲು ಬದ್ಧ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಸಚಿವರು,ಶಾಸಕರೊಂದಿಗೆ ನಿರಂತರವಾಗಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಕೊಪ್ಪಳ ಬಳಿ ಮತ್ತೊಂದು ಕಾರ್ಖಾನೆ ಬೇಡವೇ ಬೇಡ ಎಂದು ಹೇಳಿದ್ದೇನೆ. ಈಗ ಬಂದಿರುವ ಕಾರ್ಖಾನೆಗಳನ್ನು ನಿಯಂತ್ರಣ ಮಾಡುವುದು ಹಾಗೂ ಇನ್ನೆಂದು ಮತ್ತೊಂದು ಕಾರ್ಖಾನೆ ಬಾರದಂತೆ ಹೋರಾಟ ಮಾಡಬೇಕಾಗಿದೆ ಎಂದರು.ನಾನು ಕೊಪ್ಪಳದಲ್ಲಿ ಇರುವುದಿಲ್ಲ:
ಕೊಪ್ಪಳದಲ್ಲಿ ಈಗ ಘೋಷಣೆಯಾಗಿರುವ ಕಾರ್ಖಾನೆ ಪ್ರಾರಂಭವಾದರೆ ನಾನಂತೂ ಕೊಪ್ಪಳದಲ್ಲಿ ಇರುವುದಿಲ್ಲ. ನಾನು ಕೊಪ್ಪಳ ತೊರೆಯುತ್ತೇನೆ. ಇಲ್ಲ ಆ ಕಾರ್ಖಾನೆ ತೊಲಗಿಸೋಣ ಎಂದ ಶ್ರೀಗಳು, ಕಾರ್ಖಾನೆ ಪ್ರಾರಂಭವಾದರೆ ಕೊಪ್ಪಳದಲ್ಲಿ ತೊಟ್ಟಿಲಕ್ಕೆ ಹೋಗುವವರಿಗಿಂತ ಸ್ಮಶಾನಕ್ಕೆ ಹೋಗುವವರೇ ಹೆಚ್ಚಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.ನನಗೂ ಸಹ ಬಲ್ಡೋಟಾದವರು ಪೂಜೆಗೆ ಆಹ್ವಾನಿಸಿದ್ದರು. ಆಗ ನಾನು, ಬರುವುದಿಲ್ಲ. ನಿಮ್ಮ ಕಾರ್ಖಾನೆ ಇಲ್ಲಿ ಹಾಕುವುದಕ್ಕೆ ನನ್ನ ವಿರೋಧವಿದೆ ಎಂದು ಹೇಳಿದ್ದೇನೆ ಎಂದರು.
ಎಂಎಸ್‌ಪಿಎಲ್ ಸೇರಿದಂತೆ ಇಲ್ಲಿ ಹಾಕಿರುವ ಕಾರ್ಖಾನೆ ಪ್ರಾರಂಭಿಸುವ ವೇಳೆ ಯಾರನ್ನು ಕೇಳಿದ್ದಾರೆ. ಯಾವಾಗ ಸಾರ್ವಜನಿಕ ಸಭೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಶ್ರೀಗಳು, ಈಗಾಗಲೇ ಇರುವ ಕಾರ್ಖಾನೆಗಳು ಸಹ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ನಂತರ ಸದ್ದಿಲ್ಲದೆ ದೊಡ್ಡದು ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನು ಸುಮ್ಮನೇ ಕುಳಿತುಕೊಳ್ಳದೆ, ಹಿಂದೆ ಆಗಿರುವ ತಪ್ಪು ಕೈಬಿಟ್ಟು, ಹೋರಾಟ ಮಾಡೋಣ ಎಂದರು.ಸರ್ಕಾರಗಳು ಯಾವುದೇ ಇರಲಿ. ಯಾವುದೇ ಪಕ್ಷಗಳಿದ್ದರೂ ಟೀಕೆ, ಟಿಪ್ಪಣಿ ಬೇಡ. ಎಲ್ಲ ಸಂಘಟನೆಗಳು ನೇತೃತ್ವ ವಹಿಸಿಕೊಳ್ಳಲಿ. ಎಲ್ಲ ಮಠದ ಸ್ವಾಮೀಜಿ, ರೈತರನ್ನು, ಸಂಘಟನೆಗಳು, ವಕೀಲರು, ವೈದ್ಯರನ್ನು ಕರೆಯಿರಿ ಎಂದ ಶ್ರೀಗಳು, ಕಾರ್ಖಾನೆ ಪ್ರಾರಂಭಿಸಲು ಸರ್ಕಾವೇ ಅನುಮತಿ ನೀಡಿದ್ದು, ಸರ್ಕಾರವೇ ಅದನ್ನು ಹಿಂಪಡೆಯಬೇಕು. ನಾವು ಯಾರೂ ಸಹ ಕೋರ್ಟ್‌ಗೆ ಹೋಗುವುದು ಬೇಡ. ಸರ್ಕಾರದ ವಿರುದ್ಧವೇ ಹೋರಾಟ ಮಾಡೋಣ ಎಂದರು.
ಕೊಪ್ಪಳ ಸುತ್ತಮುತ್ತ ೪೦ ಕಿಮೀ ವ್ಯಾಪ್ತಿಯ ವರೆಗೂ ಧೂಳು ಬರುತ್ತಿದೆ. ಡೊಂಬರಹಳ್ಳಿ ಎಲೆಬಳ್ಳಿ ಸರ್ವನಾಶವಾಗಿದೆ. ಹಿರೇಬಗನಾಳದಲ್ಲಿ ಕ್ಯಾನ್ಸರ್ ಕಾಣುತ್ತಿದೆ. ಕನಕಾಪುರ ತಾಂಡಾದಲ್ಲಿ ೯ ಜನರಿಗೆ ಅಸ್ತಮಾ, ೨೦ಕ್ಕೂ ಹೆಚ್ಚು ಜನರಿಗೆ ಟಿಬಿ ಬಂದಿದೆ. ಆ ಊರಲ್ಲಿ ಕುಡಿಯುವ ನೀರಿನಲ್ಲಿ ಆಯಿಲ್ ಅಂಶ ಬರುತ್ತಿದೆ. ಹಿಂದೆ ಯಾರಿಂದ ತಪ್ಪಾಗಿದೆಯೋ? ಅದೆಲ್ಲವನ್ನು ಬಿಟ್ಟು ಈಗ ಶಾಸಕನಿಂದ ಹಿಡಿದು ಸಾಮಾನ್ಯನ ವರೆಗೂ ಹೋರಾಟಕ್ಕೆ ಬರಬೇಕು ಎಂದರು.ಕಾರ್ಖಾನೆ ಇಲ್ಲಿಂದ ಹೋಗುವ ವರೆಗೂ ನಮ್ಮ ಹೋರಾಟ ನಿರಂತರ ನಡೆಯಬೇಕು. ಹೋರಾಟ ಹೇಗೆ ಮಾಡಬೇಕು? ಯಾವ ರೀತಿ ಮಾಡಬೇಕು ಎಂದು ಕುಳಿತು ಚರ್ಚಿಸೋಣ ಎಂದ ಶ್ರೀಗಳು, ನಮಗೆ ನೀರಿಲ್ಲ, ರಾಯಚೂರು ಜಿಲ್ಲೆಯವರಿಗೂ ತುಂಗಭದ್ರಾ ಜಲಾಶಯದಿಂದ ನೀರು ಕೊಡಲು ಆಗುತ್ತಿಲ್ಲ. ಹೀಗಿರುವಾಗ ಮತ್ತೊಂದು ಕಾರ್ಖಾನೆ ಬಂದರೆ ಗತಿ ಏನು? ಎಂದು ಪ್ರಶ್ನಿಸಿದರು.