ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸ್ವ ಉದ್ಯೋಗ, ವೃತ್ತಿ ಕೌಶಲ್ಯತೆ, ಶಿಕ್ಷಣಕ್ಕೆ ಆದ್ಯತೆ ನೀಡಿ, ಸರ್ಕಾರದ ವಿವಿಧ ಆರ್ಥಿಕ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗಕ್ಕೆ ದೊರಕಿಸಿಕೊಡಲು ಅಧಿಕಾರಿಗಳು ಇಚ್ಛಾಶಕ್ತಿ ಮತ್ತು ಅಂತಃಕರಣದಿಂದ ಕಾರ್ಯನಿರ್ವಹಿಸಿ ಸಮುದಾಯದವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಅರ್ಹರಿಗೆ ಲಾಭ ದೊರಕಿಸಿಕೊಡಬೇಕು ಎಂದು ಹೇಳಿದರು.
ವಸತಿ ಶಾಲೆಗಳಲ್ಲಿ ಈ ಸಮುದಾಯದ ಮಕ್ಕಳಿಗೆ ಆದ್ಯತೆಯ ಮೇರೆಗೆ ಯಾವುದೇ ಪ್ರವೇಶ ಪರೀಕ್ಷೆ ನಡೆಸದೇ ಪ್ರವೇಶಾವಕಾಶ ನೀಡಲು ಸರ್ಕಾರ ಅವಕಾಶ ನೀಡಿದೆ. ಇದರಿಂದ ಈ ಸಮುದಾಯದ ಮಕ್ಕಳು ಉನ್ನತ, ಗುಣಮಟ್ಟದ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆಗಳು ಅನುವು ಮಾಡಿಕೊಡಬೇಕು. ನಿವೇಶನ ರಹಿತ ಅಲೆಮಾರಿ ಕುಟುಂಬಗಳ ಸರ್ಕಾರಿ ಭೂಮಿಯನ್ನು ಗುರುತಿಸಬೇಕು. ವಸತಿ ರಹಿತ, ವಸಹಿತರ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾಲ ಸೌಲಭ್ಯ ಸಮರ್ಪಕವಾಗಿ ಒದಗಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯಡಿ ನಿಗದಿಪಡಿಸಲಾದ ಭೌತಿಕ ಗುರಿಗಳಿಗನುಗುಣವಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಇತ್ಯರ್ಥಪಡಿಸಬೇಕು. ಬ್ಯಾಂಕುಗಳು ಸಹ ಅಗತ್ಯ ದಾಖಲೆಗಳನ್ನು ಪಡೆದು, ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಕೈಗೊಳ್ಳಲು ಸಾಲ-ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡು ಈ ಸಮುದಾಯಗಳ ಕಾಲೋನಿಗಳಿಗೆ ಭೇಟಿ ನೀಡಿ, ಕುಂದು-ಕೊರತೆ ಆಲಿಸಲಾಯಿತು. ಕೊಲ್ಹಾರದ ಹರಿಣಶಿಕಾರಿ ಕಾಲೋನಿ, ಇಂಡಿಯ ಬಬಲಾದಿಯ ಚನ್ನದಾಸರ ಕಾಲೋನಿ, ಚವಡಿಹಾಳ, ಇಂಡಿ ಪಟ್ಟಣದ ಹರಿಣಶಿಕಾರಿ ಕಾಲೋನಿ, ಮಾವಿನಹಳ್ಳಿಯ ಚನ್ನದಾಸರ ಕಾಲನಿ, ವಿಜಯಪುರದ ಕುಂಚಿ-ಕೊರವರ ಓಣಿ, ಸಂಜಯ ಗಾಂಧಿ ಕಾಲೋನಿಯ ಹಂದಿಜೋಗಿ ಸಮುದಾಯದವರು ವಾಸಿಸುತ್ತಿರುವ ಕಾಲೋನಿಗಳಿಗೆ ಭೇಟಿ ನೀಡಲಾಗಿದೆ. ಆಗ ಅತಿ ಹೆಚ್ಚು ಮೂಲ ಸೌಲಭ್ಯಗಳು ಕಲ್ಪಿಸುವ ಅಗತ್ಯವಿದೆ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ದಾಖಲಾದ ಪ್ರಕರಣಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಲಾಯಿತು.ಜನಾಂಗದವರಿಂದ ಕಾಲೋನಿಗಳಲ್ಲಿ ಗ್ರಂಥಾಲಯಕ್ಕೆ ಬೇಡಿಕೆ ಸಲ್ಲಿಸಿದ್ದು, ಆದ್ಯತೆಯ ಮೇಲೆ ಮನವಿಯನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಇಒ ರಿಷಿ ಆನಂದ ಮಾತನಾಡಿ, ಈಗಾಗಲೇ ೨೦೧ ಗ್ರಂಥಾಲಯಗಳಿದ್ದು, ೨೮೦ ಮಂಜೂರಾಗಿವೆ. ಈ ಸಮುದಾಯದ ಬೇಡಿಕೆಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಎಎಸ್‌ಪಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಆನಂದಕುಮಾರ ಉಪಸ್ಥಿತರಿದ್ದರು.