ಇಂದು ಕ್ರಾಂತಿವೀರ ಬ್ರಿಗೇಡ್‌ ಚಾಲನೆ

| Published : Feb 04 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಸಂಘಟಿಸಲಾಗುತ್ತಿರುವ ಬಹುನಿರೀಕ್ಷಿತ ಕ್ರಾಂತಿವೀರ ಬ್ರಿಗೇಡ್‌ ಬಸವಣ್ಣನ ನಾಡು ಬಸವನ ಬಾಗೇವಾಡಿಯಲ್ಲಿ ಇಂದು ಚಾಲನೆಗೊಳ್ಳಲಿದೆ. ಬ್ರಿಗೇಡ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಕ್ಕಿಂತ ಅಧಿಕ ಸ್ವಾಮೀಜಿಗಳು ಭಾಗವಹಿಸಲಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ಬಸವನಬಾಗೇವಾಡಿ ಸಿದ್ಧಗೊಂಡಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಸಂಘಟಿಸಲಾಗುತ್ತಿರುವ ಬಹುನಿರೀಕ್ಷಿತ ಕ್ರಾಂತಿವೀರ ಬ್ರಿಗೇಡ್‌ ಬಸವಣ್ಣನ ನಾಡು ಬಸವನ ಬಾಗೇವಾಡಿಯಲ್ಲಿ ಇಂದು ಚಾಲನೆಗೊಳ್ಳಲಿದೆ. ಬ್ರಿಗೇಡ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಕ್ಕಿಂತ ಅಧಿಕ ಸ್ವಾಮೀಜಿಗಳು ಭಾಗವಹಿಸಲಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ಬಸವನಬಾಗೇವಾಡಿ ಸಿದ್ಧಗೊಂಡಿದೆ.

ಪಟ್ಟಣದ ಇವಣಗಿ ರಸ್ತೆಯಲ್ಲಿರುವ ಗುರುಕೃಪಾ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆ ಬಳಿಯ ವಿಶಾಲ ಜಾಗದಲ್ಲಿ ಕ್ರಾಂತಿವೀರ ಬ್ರಿಗೇಡ್‌ನ ಉದ್ಘಾಟನೆ ಕಾರ್ಯಕ್ರಮಕ್ಕೆ ಬೃಹತ್‌ ವೇದಿಕೆ ಸಿದ್ಧಮಾಡಲಾಗಿದೆ. ಫೆ.4ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದಲ್ಲಿ ಜರುಗುವ ಸಂಘಟನೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಹಿಂದು ಧರ್ಮವನ್ನು, ದೇಶವನ್ನು ರಕ್ಷಣೆ ಮಾಡಲು ಆಶೀರ್ವಾದ ಮಾಡಲು 1008 ಸ್ವಾಮೀಜಿಗಳು ಸೇರುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದು ಮೊದಲನೆಯದು. ಹಿಂದುಳಿದ ವರ್ಗ, ದಲಿತರು, ಬಡವರಿಗೆ ನ್ಯಾಯ ಕೊಡಿಸುವುದು ಈ ಸಂಘಟನೆಯ ಉದ್ದೇಶ. ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕರ್ತರು ಪ್ರತಿಜ್ಞೆಯನ್ನು ಮಾಡಲಿದ್ದಾರೆ. ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯ ಸಂಚಾಲಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.

ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗಾಗಿ ಅಂದಾಜು ನಾಲ್ಕೂವರೆ ಎಕರೆ ಜಮೀನಿನಲ್ಲಿ 300 ಅಡಿ ಅಗಲ, 500 ಅಡಿ ಉದ್ದದ ಭವ್ಯ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಬೃಹತ್ ವೇದಿಕೆಯಲ್ಲಿ 1100 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಂದು ಲಕ್ಷಕ್ಕೂಅಧಿಕ ಜನರು ಆಗಮಿಸಲಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು, ಊಟ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ವಾಹನಗಳ ಪಾರ್ಕಿಂಗ್‌ಗಾಗಿ ಅಂದಾಜು ಎಂಟೂವರೆ ಎಕರೆ ಜಾಗವನ್ನು ನಿಗದಿಪಡಿಸಲಾಗಿದೆ. ಕಳೆದ ಒಂದು ತಿಂಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಾರ್ಯಕರ್ತರು ಉದ್ಘಾಟನೆ ಸಮಾರಂಭದ ಯಶಸ್ವಿಗೆ ಶ್ರಮಿಸಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಪಟ್ಟಣದ ಆಯ್ದ ರಸ್ತೆಗಳಲ್ಲಿ ಸಂಘಟನೆಯ ಕೇಸರಿ ಭಾವುಟಗಳನ್ನು ಕಟ್ಟಿ ಸಿಂಗಾರ ಮಾಡಲಾಗಿದ್ದು, ಅಲ್ಲಲ್ಲಿ, ಸ್ವಾಗತ ಕೋರುವ ಬ್ಯಾನರ್‌ ಮತ್ತು ಬಂಟಿಂಗ್ಸ್‌ಗಳನ್ನು ಹಾಕಿ ಸಜ್ಜುಗೊಳಿಸಲಾಗಿದೆ.ಕ್ರಾಂತಿವೀರ ಬ್ರಿಗೇಡ್ ಕರ್ನಾಟಕದ ಕಾರ್ಯಾಧ್ಯಕ್ಷ ಕಾಂತೇಶ ಈಶ್ವರಪ್ಪ, ಈರಣ್ಣ ಹಳಗೌಡರ ಮಾತನಾಡಿದರು. ಈ ಸಂದರ್ಭದಲ್ಲಿ ರಾಜೇಶ್ವರಿ ಯರನಾಳ, ಅಮರೇಶ ಕಾಮನಕೇರಿ, ಶಿಲ್ಪಾ ಕುದರಗೊಂಡ, ಕಲ್ಲು ಸೊನ್ನದ, ಬಸವರಾಜ ಬಿಜಾಪುರ, ರಾಜು ಮುಳವಾಡ, ಮುದಕಣ್ಣ ಹೊರ್ತಿ, ರಾಜಶೇಖರ ಯರನಾಳ, ರೇವಣಸಿದ್ದ ಮಣ್ಣೂರ, ಅಶೋಕ ಒಡೆಯರ ಇತರರು ಇದ್ದರು.ಬಾಕ್ಸ್‌

ಏನೇನು ಕಾರ್ಯಕ್ರಮ

ಉದ್ಘಾಟನೆಗೂ ಮುನ್ನ ಪಟ್ಟಣದ ಬಸವಜನ್ಮ ಸ್ಮಾರಕ ಮುಂಭಾಗ 1008 ಕುಂಭಹೊತ್ತ ಮಹಿಳೆಯರು ಸೇರಿದಂತೆ ಸಂಘಟನೆ ಕಾರ್ಯಕರ್ತರು ವಿವಿಧ ಭಾಗಗಳಿಂದ ಆಗಮಿಸುವ 1008 ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಸ್ವಾಗತಿಲಾಗುವುದು. ನಂತರ ಕುಂಭಮೇಳದ ಮೆರವಣಿಗೆಯು ಬಸವಜನ್ಮಸ್ಥಳ ಸ್ಮಾರಕದಿಂದ ಆರಂಭವಾಗಿ ಬಸವಸ್ಮಾರಕದ ಮಹಾದ್ವಾರ, ವಿಜಯಪುರ ಮುಖ್ಯರಸ್ತೆ ಮೂಲಕ ಬಸವೇಶ್ವರ ವೃತ್ತದ ಮಾರ್ಗವಾಗಿ ಗುರುಕೃಪಾ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಯ ಹತ್ತಿರದ ಕಾರ್ಯಕ್ರಮ ಸ್ಥಳ ತಲುಪಲಿದೆ. ನಂತರ ವೇದಿಕೆಯಲ್ಲಿ 1008 ಸ್ವಾಮೀಜಿಗಳ ಪಾದಪೂಜೆಯನ್ನು ಈಶ್ವರಪ್ಪ ನೆರವೇರಿಸಲಿದ್ದಾರೆ. ನಂತರ ಕ್ರಾಂತಿವೀರ ಬ್ರಿಗೇಡ್ ಸಂಘಟನೆಯನ್ನು ಉದ್ಘಾಟನೆ ಮಾಡಲಾಗುತ್ತದೆ. ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.