(ಬೇಡ) ಡಿಸೆಂಬರ್‌ 30ರಿಂದ ಕೆಸ್ಸಾರ್ಟಿಸಿ ಅನಿರ್ದಿಷ್ಟಾವಧಿ ಮುಷ್ಕರ: ಜಿ.ಸಿ.ಸುರೇಶ್

| Published : Dec 30 2024, 01:01 AM IST

(ಬೇಡ) ಡಿಸೆಂಬರ್‌ 30ರಿಂದ ಕೆಸ್ಸಾರ್ಟಿಸಿ ಅನಿರ್ದಿಷ್ಟಾವಧಿ ಮುಷ್ಕರ: ಜಿ.ಸಿ.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಸತಾಯಿಸುತ್ತಿರುವುದನ್ನು ವಿರೋಧಿಸಿ ಡಿ.31ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಚಿತ್ರದುರ್ಗ ವಿಭಾಗದ ಗೌರವಾಧ್ಯಕ್ಷ ಜಿ.ಸಿ.ಸುರೇಶ್‌ಬಾಬು ತಿಳಿಸಿದರು. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನೌಕರರ ಬೇಡಿಕೆ ಈಡೇರಿಕೆಗೆ ಮುಷ್ಕರ ಅನಿವಾರ್ಯ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೆಎಸ್ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರ್ಕಾರ ಸತಾಯಿಸುತ್ತಿರುವುದನ್ನು ವಿರೋಧಿಸಿ ಡಿ.31ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಚಿತ್ರದುರ್ಗ ವಿಭಾಗದ ಗೌರವಾಧ್ಯಕ್ಷ ಜಿ.ಸಿ.ಸುರೇಶ್‌ಬಾಬು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿರುವುದು ಸ್ವಾಗತಾರ್ಹ. ರಾಜ್ಯದ ನಾಲ್ಕು ನಿಗಮಗಳ ಚಾಲಕರು ಹಾಗೂ ನಿರ್ವಾಹಕರ ಶ್ರಮದಿಂದ ಪ್ರಯಾಣಿಕರು ಸುರಕ್ಷಿತವಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ಚರ್ಚಿಸಿ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಅಲ್ಲಿ ನಮ್ಮ ಮನವಿ ಪತ್ರವನ್ನು ಪಡೆಯಲು ಸಿಎಂ ಬರಲಿಲ್ಲ. ಅವರ ಬದಲಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ಸ್ವೀಕರಿಸಿ ಸಾರಿಗೆ ಸಚಿವರ ಗಮನ ಸೆಳೆಯುವ ಭರವಸೆ ನೀಡಿದರೆ ವಿನಃ ಇದುವರೆವಿಗೂ ಯಾವುದೂ ಈಡೇರಿಲ್ಲ. ಆದ್ದದರಿಂದ ನೌಕರರು ಮುಷ್ಕರಕ್ಕೆ ಇಳಿಯುವುದು ಅನಿವಾರ್ಯ ಎಂದರು.

ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಕಾರ್ಯಾಧ್ಯಕ್ಷ ರಹೀಂಸಾಬ್ ಮಾತನಾಡಿ, 38 ತಿಂಗಳ ವೇತನ ಬಾಕಿ ಕೂಡಲೇ ಪಾವತಿಸಬೇಕು. 1-1-2024 ರಿಂದ ವೇತನ ಪರಿಷ್ಕರಣೆ ಹಾಗೂ ನಿವೃತ್ತ ನೌಕರರಿಗೆ 27-6-2024 ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆಯಿಲ್ಲ. ಬೊಮ್ಮಯಿ ಮುಖ್ಯಮಂತ್ರಿಯಾಗಿದ್ದಾಗ ಶೇ.15 ರಷ್ಟು ವೇತನ ಹೆಚ್ಚಳ ಮಾಡಿದ್ದನ್ನು ಇದುವರೆಗೂ ನೀಡಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ. ಪ್ರಯಾಣಿಕರಿಗೆ ತೊಂದರೆಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಟಿ.ಅಶೋಕ್, ಉಪಾಧ್ಯಕ್ಷ ಟಿ.ಆರ್.ಉಮಾಪತಿ, ಸಂಘಟನಾ ಕಾರ್ಯದರ್ಶಿ ಸತ್ಯಮೂರ್ತಿ ಇದ್ದರು.