ಹೊಸ ವರ್ಷ ಹೆಸರಲ್ಲಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ

| Published : Dec 30 2024, 01:01 AM IST

ಸಾರಾಂಶ

ಸೈಬರ್‌ ಕ್ರೈಂ ಬಗ್ಗೆ ನಗರ ಪೊಲೀಸ್‌ ಇಲಾಖೆಯಿಂದ ನಿರಂತರವಾಗಿ 217 ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬ್ಯಾಂಕ್‌ ಅಧಿಕಾರಿಗಳನ್ನು ಜತೆಗೂಡಿಸಿಕೊಂಡು ವಾಕಥಾನ್‌, ಜಾಥಾ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳ ಕುರಿತು ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತು ಎಪಿಕೆ ಫೈಲ್‌ಗಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು ಮತ್ತು ಎಪಿಕೆ ಫೈಲ್‌ಗಳನ್ನು ವಾಟ್ಸಪ್‌ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ತಕ್ಷಣ ಡಿಲೀಟ್ ಮಾಡಬೇಕು. ಯಾವುದೇ ಕಾರಣಕ್ಕೂ ಹಾನಿಕರ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ಯಾರಿಗೂ ಶೇರ್ ಮಾಡಬಾರದು.

ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದರೆ ಕೂಡಲೇ 1930ಕ್ಕೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸುವಂತೆ ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.2024ರಲ್ಲಿ 42 ಮಂದಿ ಬಂಧನ:

ಮಂಗಳೂರು ನಗರ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2024ನೇ ಸಾಲಿನಲ್ಲಿ ದಾಖಲಾಗಿದ್ದ 134 ಸೈಬರ್‌ ಕ್ರೈಂ ಪ್ರಕರಣಗಳ ಪೈಕಿ ಅನೇಕ ಕ್ಲಿಷ್ಟಕರ ಪ್ರಕರಣಗಳನ್ನೂ ಸೇರಿಸಿ 42 ಆರೋಪಿಗಳನ್ನು ಪೊಲೀಸ್‌ ಇಲಾಖೆ ಬಂಧಿಸಿದೆ.ಮಂಗಳೂರು ಸೆನ್‌ ಪೊಲೀಸ್‌ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್‌ ಠಾಣೆಗಳಲ್ಲಿ 72 ಸೇರಿದಂತೆ ಒಟ್ಟು 134 ಸೈಬರ್‌ ಕ್ರೈಂ ಪ್ರಕರಣಗಳು ಈ ವರ್ಷ ದಾಖಲಾಗಿದ್ದವು.

ಹೂಡಿಕೆ ಹೆಸರಲ್ಲಿ 67 ವಂಚನೆ ಪ್ರಕರಣದಲ್ಲಿ 30,36,61,299 ರು., ಫೆಡೆಕ್ಸ್‌, ಕೊರಿಯರ್‌, ಡಿಜಿಟಲ್‌ ಅರೆಸ್ಟ್‌ ಇತ್ಯಾದಿ 25 ಪ್ರಕರಣಗಳಲ್ಲಿ 7,07,99,645 ರು., ಉದ್ಯೋಗದ ಹೆಸರಲ್ಲಿ 8 ವಂಚನೆ ಪ್ರಕರಣದಲ್ಲಿ 1,21,64,788 ರು., ಮ್ಯಾಟ್ರಿಮೋನಿಯಲ್‌ ಹೆಸರಲ್ಲಿ 4 ಪ್ರಕರಣ ದಾಖಲಾಗಿದ್ದು, 60,46,708 ರು. ವಂಚನೆ, ಆನ್‌ಲೈನ್‌ ಶಾಪಿಂಗ್‌ ಹೆಸರಲ್ಲಿ 3 ವಂಚನೆ ಪ್ರಕರಣದಲ್ಲಿ 5,93,626 ರು.ಗಳನ್ನು ನಾಗರಿಕರು ಕಳೆದುಕೊಂಡಿದ್ದಾರೆ.ಅದೇ ರೀತಿ, ಷೇರು ಮಾರುಕಟ್ಟೆ ಹೆಸರಲ್ಲಿ 5 ವಂಚನೆ ಪ್ರಕರಣದಲ್ಲಿ 41,96,000 ರು., ಜಾಹೀರಾತು ಹೆಸರಲ್ಲಿ 4 ವಂಚನೆ ಪ್ರಕರಣ- 50 ಸಾವಿರ ರು., ಕೆವೈಸಿ ಹೆಸರಲ್ಲಿ 3 ವಂಚನೆ ಪ್ರಕರಣ- 8,35,000 ರು., ಇತರ 15 ವಂಚನೆ ಪ್ರಕರಣಗಳಲ್ಲಿ 63,28,627 ರು. ಸೇರಿದಂತೆ ಒಟ್ಟು 40,46,75,693 ರು.ಗಳನ್ನು ವಂಚಕರು ಕಬಳಿಸಿದ್ದರು. ಈ ಪೈಕಿ 9,32,54,814 ರು. ವಂಚನೆಯನ್ನು ತಡೆ ಹಿಡಿಯಲಾಗಿದ್ದರೆ, 2,55,45,674 ರು.ಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ.

2023ರಲ್ಲಿ 9,83,56,130 ಕೋಟಿ ರು. ಸೈಬರ್‌ ವಂಚಕರ ಪಾಲಾಗಿದ್ದು, 6,29,82,359 ಕೋಟಿ ರು. ತಡೆಹಿಡಿಯಲಾಗಿತ್ತು. 1,17, 16,681 ಕೋಟಿ ರು.ಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿತ್ತು. 2022ರಲ್ಲಿ 61 ಲಕ್ಷ ರು. ವಂಚಕರ ಪಾಲಾಗಿದ್ದು, 7 ಲಕ್ಷ ರು. ತಡೆ ಹಿಡಿಯಲಾಗಿತ್ತು. 6 ಲಕ್ಷ ರು.ಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿತ್ತು.

42 ಆರೋಪಿಗಳ ಬಂಧನ: 2024ನೇ ಸಾಲಿನಲ್ಲಿ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಒಟ್ಟು 42 ಆರೋಪಿಗಳ ಪೈಕಿ 15 ಮಂದಿ ಕರ್ನಾಟಕದವರು. 9 ಮಂದಿ ತಮಿಳುನಾಡು, 11 ಮಂದಿ ಕೇರಳ, ಇಬ್ಬರು ಆಂಧ್ರಪ್ರದೇಶ, ಉಳಿದಂತೆ ಒಡಿಸ್ಸಾ, ದೆಹಲಿ, ಜಮ್ಮು ಕಾಶ್ಮೀರ, ಮಹಾರಾಷ್ಟ್ರದ ತಲಾ ಒಬ್ಬರು ಸೇರಿದ್ದಾರೆ.

ಸೈಬರ್‌ ಕ್ರೈಂ ಬಗ್ಗೆ ನಗರ ಪೊಲೀಸ್‌ ಇಲಾಖೆಯಿಂದ ನಿರಂತರವಾಗಿ 217 ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬ್ಯಾಂಕ್‌ ಅಧಿಕಾರಿಗಳನ್ನು ಜತೆಗೂಡಿಸಿಕೊಂಡು ವಾಕಥಾನ್‌, ಜಾಥಾ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರ ಪ್ರಕಟಣೆ ತಿಳಿಸಿದೆ.