ವಿಶ್ವ ಮಾನವತೆ ಸಂದೇಶ ನೀಡಿ ಜನಮಾನಸದಲ್ಲಿ ಉಳಿದ ಕುವೆಂಪು

| Published : Dec 30 2024, 01:01 AM IST

ವಿಶ್ವ ಮಾನವತೆ ಸಂದೇಶ ನೀಡಿ ಜನಮಾನಸದಲ್ಲಿ ಉಳಿದ ಕುವೆಂಪು
Share this Article
  • FB
  • TW
  • Linkdin
  • Email

ಸಾರಾಂಶ

ಮಾನವೀಯ ಪ್ರೀತಿಯ ಹಾಗೂ ಬಂಧುತ್ವದ ಸಂದೇಶ ಕೊಟ್ಟು ಸದಾ ಜನಮಾನಸದಲ್ಲಿ ನಿಲ್ಲುವಂತಹ ಸಂದೇಶ ನೀಡಿ ರಾಷ್ಟ್ರಕವಿ ಕುವೆಂಪು ಜನ ಮಾಸನದಲ್ಲಿ ಉಳಿದಿದ್ದಾರೆ ಎಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಮಹಾಸ್ವಾಮೀಜಿ ಹೇಳಿದರು. ಚಿತ್ರದುರ್ಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಮುರುಘಾಮಠದಲ್ಲಿ ನಡೆದ ಕುವೆಂಪು ಜನ್ಮ ದಿನಾಚರಣೆಯಲ್ಲಿ ಬಸವಪ್ರಭು ಸ್ವಾಮೀಜಿ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗವಿವಿಧತೆಯಲ್ಲಿ ಏಕತೆ ಹೊಂದಿದ ,ಬಹುಮುಖಿ ಸಂಸ್ಕೃತಿಯ ಸುಂದರ ತಾಣ ಭಾರತ. ಅದು ಸದಾ ಶಾಂತಿಯ ತೋಟವಾಗಿರಬೇಕೆಂಬ ವಿಶ್ವಮಾನವತೆಯ, ಮಾನವೀಯ ಪ್ರೀತಿಯ ಹಾಗೂ ಬಂಧುತ್ವದ ಸಂದೇಶ ಕೊಟ್ಟು ಸದಾ ಜನಮಾನಸದಲ್ಲಿ ನಿಲ್ಲುವಂತ ಸಂದೇಶ ನೀಡಿ ರಾಷ್ಟ್ರಕವಿ ಕುವೆಂಪು ಜನ ಮಾಸನದಲ್ಲಿ ಉಳಿದಿದ್ದಾರೆ ಎಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಮಹಾಸ್ವಾಮೀಜಿ ಹೇಳಿದರು.ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಸಾನ್ನಿಧ್ಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವದ ಸಾನ್ನಿಧ್ಯವಹಿ ಮಾತನಾಡಿದ ಅವರು, ವ್ಯಕ್ತಿ ಜಾತಿಯಿಂದ ದೊಡ್ಡವನಾಗದೆ ತನ್ನ ಕಾರ್ಯ ಸಾಧನೆಯಿಂದ ಜಗಕೆ ಉತ್ತಮ ಕೊಡುಗೆ ನೀಡುವ ಮೂಲಕ ಎತ್ತರಕ್ಕೇರಬೇಕಿದೆ ಎಂದರು.ಹುಟ್ಟುವಾಗ ವಿಶ್ವಮಾನವತೆ ಹೊಂದುವ ನಾವು ಬೆಳೆದು ಶಿಕ್ಷಣ, ಜ್ಞಾನ ಹೊಂದುತ್ತಾ ಜಾತಿ ಸಂಕೋಲೆಗೊಳಗಾಗುತ್ತಿರುವುದು ವಿಷಾದಕರ. ವಿಶ್ವಮಾನವತೆಯ ದೂರದೃಷ್ಟಿ ಹೊಂದಿದ್ದ ಬಸವಣ್ಣನವರು ಅಸಮಾನತೆ, ಲಿಂಗತಾರತಮ್ಯ, ಮೂಢನಂಬಿಕೆ ಅವೈಜ್ಞಾನಿಕ ಆಚರಣೆಗಳ ಕತ್ತಲೆಯಿಂದ ಬಿಡಿಸಲು ಸೂರ್ಯನೋಪಾದಿಯಲ್ಲಿ ಬಸವಣ್ಣ ಬಂದರು. ಅಂತಹ ವಿಶ್ವ ಮಾನವತೆಯ ತತ್ವ ಹೊಂದಿದ್ದ ಬಸವಣ್ಣನವರ ಪರಿಚಯ ಮುಂಚಿತವಾಗಿ ಆಗಿದ್ದರೆ ನಾನು ಬಸವ ದರ್ಶನಮ್ ನ್ನೂ ರಚಿಸುತ್ತಿದ್ದೆ ಎಂಬುದಾಗಿ ಕುವೆಂಪು ಹೇಳಿದ ಮಾತನ್ನು ಶ್ರೀಗಳು ಉದಾಹರಿಸಿದರು.ಬುದ್ಧ ಬಸವರ ನಂತರ ಅತಿ ಹೆಚ್ಚು ಸಮ ಸಮಾಜದ ನಿರ್ಮಾಣದ ಕನಸನ್ನು ಕುವೆಂಪು ಕಂಡಿದ್ದರು. ಬಸವಣ್ಣನವರ ಮೇಲೆ ಅಗಾಧ ಪ್ರೇಮ ಹೊಂದಿದ್ದ ಅವರು ಹೆಚ್ಚಾಗಿ ಅವರ ಪ್ರಭಾವಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಸರ್ವರೂ ಸರ್ವೋದಯ, ವಿಶ್ವಮಾನವ ತತ್ವ ಅಳವಡಿಸಿಕೊಂಡು ಆ ಮೂಲಕ ದ್ವೇಷ ಅಳಿಸಿ ಪ್ರೀತಿ, ಭ್ರಾತೃತ್ವ ಹೊಂದುವುದಕ್ಕಾಗಿ ಅವರು ಓ ನನ್ನ ಚೇತನ ಹಾಗೂ ನೀ ಅನಿಕೇತನ ಎಂದು ಹೇಳಿದ್ದರು. ಹೀಗಾಗಿ ಅವರಿಗೆ ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಎಂಬೆಲ್ಲಾ ಬಿರುದುಗಳು ಪ್ರಾಪ್ತವಾಗಿವೆ. ಅವರ ಬಹುಮುಖ ವ್ಯಕ್ತಿತ್ವಕ್ಕಾಗಿ ಮೊದಲ ಜ್ಞಾನಪೀಠ ಪ್ರಶಸ್ತಿ ಸಂದಾಯವಾಗಿದೆ. ಅವರ ನಾಡಗೀತೆಯ ಪ್ರತಿಯೊಂದು ಸಾಲುಗಳು ಅರ್ಥಪೂರ್ಣವಾಗಿದ್ದು, ಅವುಗಳ ಅನುಷ್ಠಾನ ಅನುಸಂಧಾನ ನಮ್ಮದಾಗಬೇಕೆಂದು ಸಲಹೆ ನೀಡಿದರು.ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಆಯುರ್ವೇದ ವೈದ್ಯ ಡಾ.ನವೀನ್ ಸಜ್ಜನ್, ಕವಿ ಹಾಗೂ ಕಂಪ್ಯೂಟರ್ ಮಾಹಿತಿ ತರಬೇತುದಾರ ವಿನಯ್ ಕುಮಾರ್ ಸೇರಿದಂತೆ, ವಿವಿಧ ಗ್ರಾಮದ ಜನರು, ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಸಮಾರಂಭದ ಆರಂಭಕ್ಕೆ ವಿದ್ಯಾರ್ಥಿಗಳು ವಚನ, ನಾಡಗೀತೆ ಪ್ರಸ್ತುತಪಡಿಸಿದರು. ಎಸ್‌ಜೆಎಂ ವಿದ್ಯಾಪೀಠದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಎನ್.ಚೆಲುವರಾಜು ಸ್ವಾಗತಿಸಿದರು. ಅಧ್ಯಾಪಕ ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ್ ನಿಟುವಳ್ಳಿ ಶರಣು ಸಮರ್ಪಣೆ ಮಾಡಿದರು.