ಒತ್ತುವರಿ ಭೂಮಿ ಗುತ್ತಿಗೆಗಾಗಿ ಬೆಳೆಗಾರರ ಆಸಕ್ತಿ

| Published : Dec 30 2024, 01:01 AM IST

ಒತ್ತುವರಿ ಭೂಮಿ ಗುತ್ತಿಗೆಗಾಗಿ ಬೆಳೆಗಾರರ ಆಸಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಒತ್ತುವರಿ ಭೂಮಿ ಗುತ್ತಿಗೆ ನೀಡುವ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬೆಳೆಗಾರರ ಪರವಾದ ನಿಲುವನ್ನು ಪ್ರಕಟಿಸಿ ಯೋಜನೆ ಕಾರ್ಯಗತಕ್ಕೆ ಅಂದಿನ ಕಂದಾಯ ಸಚಿವ ಆರ್. ಅಶೋಕ್‌ ಸಾಕಷ್ಟು ಚರ್ಚೆ ನಡೆಸಿದ್ದರು. ಯೋಜನೆ ಜಾರಿಯ ವೇಳೆಗೆ ಸರ್ಕಾರ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಯೋಜನೆಗೆ ಗ್ರಹಣ ಹಿಡಿದಿತ್ತು. ಆದರೆ, ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರ ನಿರಂತರ ಒತ್ತಡದ ಪರಿಣಾಮ ರಾಜ್ಯ ಸರ್ಕಾರ ಕೊನೆಗೂ ಯೋಜನೆಗೆ ಅಸ್ತು ಎಂದಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಒತ್ತುವರಿ ಭೂಮಿ ಗುತ್ತಿಗೆ ನೀಡುವ ಸರ್ಕಾರದ ಯೋಜನೆಗೆ ಬೆಳೆಗಾರರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಒತ್ತುವರಿ ಭೂಮಿ ಗುತ್ತಿಗೆ ನೀಡುವ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬೆಳೆಗಾರರ ಪರವಾದ ನಿಲುವನ್ನು ಪ್ರಕಟಿಸಿ ಯೋಜನೆ ಕಾರ್ಯಗತಕ್ಕೆ ಅಂದಿನ ಕಂದಾಯ ಸಚಿವ ಆರ್. ಅಶೋಕ್‌ ಸಾಕಷ್ಟು ಚರ್ಚೆ ನಡೆಸಿದ್ದರು. ಯೋಜನೆ ಜಾರಿಯ ವೇಳೆಗೆ ಸರ್ಕಾರ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಯೋಜನೆಗೆ ಗ್ರಹಣ ಹಿಡಿದಿತ್ತು. ಆದರೆ, ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರ ನಿರಂತರ ಒತ್ತಡದ ಪರಿಣಾಮ ರಾಜ್ಯ ಸರ್ಕಾರ ಕೊನೆಗೂ ಯೋಜನೆಗೆ ಅಸ್ತು ಎಂದಿದೆ.

ಹಿಂದೇಟು: ಸರ್ಕಾರ ಪ್ರಾಯೋಗಿಕವಾಗಿ ಒತ್ತುವರಿ ಭೂಮಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೊದಲಿಗೆ ಚಿಕ್ಕಮಗಳೂರು ಜಿಲ್ಲೆಯನ್ನು ಆಯ್ದುಕೊಂಡಿತ್ತು. ಈ ಜಿಲ್ಲೆಯಲ್ಲಿ ಸುಮಾರು ೪೫ ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎನ್ನಲಾಗುತ್ತಿದ್ದರೂ ಒತ್ತುವರಿ ಭೂಮಿ ಗುತ್ತಿಗೆ ಪಡೆಯುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಾತ್ರ ಬೆಳೆಗಾರರು ಹಿಂದೇಟು ಹಾಕಿದ್ದು ಪ್ರಾಯೋಗಿಕ ಯೋಜನೆ ಜಾರಿಗೊಂಡು ತಿಂಗಳಿನಲ್ಲಿ ಕೇವಲ ೫೬೦ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿತ್ತು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಈ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ.

ವೇಗ: ಪ್ರಾಯೋಗಿಕ ಯೋಜನೆಗೆ ಉತ್ತಮ ಸ್ಪಂದನೆ ದೊರೆಯದಿದ್ದರೂ ನಿಧಾನಗತಿಯಲ್ಲಿ ಅರ್ಜಿ ಸಲ್ಲಿಸಲು ಬೆಳೆಗಾರರು ಉತ್ಸಾಹ ತೋರುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಒಟ್ಟು ೨೯ ಸಾವಿರ ಎಕರೆ ಭೂಮಿ ಬೆಳೆಗಾರರಿಂದ ಒತ್ತುವರಿಯಾಗಿದ್ದು, ಸಕಲೇಶಪುರ ತಾಲೂಕೊಂದರಲ್ಲಿಯೇ ೧೫ ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ. ಸದ್ಯ ಕಳೆದೊಂದು ತಿಂಗಳಿನಿಂದ ಅರ್ಜಿ ಸಲ್ಲಿಕೆಯಾಗುತಿದ್ದು ಈಗಾಗಲೇ ತಾಲೂಕೊಂದರಲ್ಲಿ ೫೧೨೦ ಅರ್ಜಿಗಳು ಸಲ್ಲಿಕೆಯಾಗಿದೆ. ಡಿಸೆಂಬರ್ ೩೧ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಎಲ್ಲ ನಾಡ ಕಚೇರಿಗಳಲ್ಲೂ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ನಿಯಮ: ಭೂಮಿ ಗುತ್ತಿಗೆ ಪಡೆಯುವ ಬೆಳೆಗಾರರು ೨೦೦೫ರಿಂದ ಗುತ್ತಿಗೆ ಪ್ರದೇಶದಲ್ಲಿ ಬೆಳೆ ಬೆಳೆದಿರಬೇಕು, ಪಾಳು ಭೂಮಿ, ದಿಣ್ಣೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಒಂದು ಕುಟುಂಬ ಗರಿಷ್ಠ ೨೫ ಎಕರೆವರೆಗೂ ೩೦ ವರ್ಷಗಳ ಕಾಲ ಗುತ್ತಿಗೆ ಪಡೆಯಬಹುದಾಗಿದೆ. ಗುತ್ತಿಗೆಪಡೆದ ಭೂಮಿಗೆ ಬ್ಯಾಂಕ್ ಸಾಲ ಸಹ ದೊರೆಯಲಿದೆ.

ಹಲವು ಬೆಳೆಗಾರರಿಗೆ ನಿರಾಸೆ: ಈಗಾಗಲೇ ಹತ್ತಾರು ವರ್ಷದಿಂದ ಭೂಮಿ ಒತ್ತುವರಿಮಾಡಿಕೊಂಡು ಬೆಳೆ ಬೆಳೆದಿದ್ದರೂ ಸೆ.೪ ಹಾಗೂ ಡೀಮ್ಡ್ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮಗಳ ಬೆಳೆಗಾರರು ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ತಾಲೂಕಿನ ೪೮೫ ಗ್ರಾಮಗಳ ಪೈಕಿ ಸುಮಾರು ೮೭ ಗ್ರಾಮಗಳ ಬೆಳೆಗಾರರಿಗೆ ಈ ಯೋಜನೆಯ ಫಲ ದಕ್ಕುತ್ತಿಲ್ಲ.

ಯೋಜನೆಯಿಂದ ಹಲವು ಲಾಭ: ಭೂಮಿ ಗುತ್ತಿಗೆ ನೀಡುವ ಸರ್ಕಾರದ ಕ್ರಮದಿಂದ ಸಾಕಷ್ಟು ಬೆಳೆಗಾರರಿಗೆ ಪರೋಕ್ಷವಾಗಿ ಲಾಭವಾಗುತ್ತಿದ್ದು, ಫಾರಂ ೫೩,೫೭ರ ಅಡಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಸಾಕಷ್ಟು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾದುಕುಳಿತಿರುವ ತಾಲೂಕಿನ ೩೩೫೧ ಬೆಳೆಗಾರರು ಭೂಮಿ ಗುತ್ತಿಗೆಗಾಗಿ ಅರ್ಜಿ ಸಲ್ಲಿಸುವ ಮೂಲಕ ಭೂಮಿ ತಮ್ಮ ಒಡೆತನದಲ್ಲಿ ಉಳಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ಅಲ್ಲದೆ ಸಣ್ಣ ಒತ್ತುವರಿದಾರರು ಈಗಾಗಲೇ ೯೪ಸಿ ಯೋಜನೆಯಡಿ ಕೇವಲ ೨ರಿಂದ ೩ ಗುಂಟೆ ಜಮೀನನ್ನು ಮಂಜೂರಾತಿ ಮಾಡಿಸಿಕೊಂಡಿದ್ದರೆ ಇನ್ನೂ ಉಳಿಕೆಯಾಗುವ ೫ರಿಂದ ೨೦ ಗುಂಟೆವರಗಿನ ಜಮೀನಿನ ಒಡೆತನಕ್ಕೆ ಯಾವುದೇ ದಾಖಲೆಗಳು ರೈತರ ಬಳಿ ಇಲ್ಲದಾಗಿತ್ತು. ಇಂತಹ ರೈತರಿಗೆ ಭೂಮಿ ಗುತ್ತಿಗೆ ನೀಡುವ ಯೋಜನೆ ಹೆಚ್ಚು ಆಶಾದಾಯಕವಾಗಿ ಗೋಚರಿಸುತ್ತಿದೆ.

ಮುಂದಿನ ಹೆಜ್ಜೆ: ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಕಳೆದ ನಂತರ ಅರ್ಜಿ ಸಲ್ಲಿಸಿರುವ ಜಮೀನಿನ ತಪಾಸಣೆ ನಡೆಸಲಿರುವ ಕಂದಾಯ ಇಲಾಖೆ ಅಧಿಕಾರಿಗಳು ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಆದರೆ, ಭೂಮಿ ತಪಸಣಾ ವರದಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸಲ್ಲಿಕೆ ಮಾಡುವುದ ಎಂಬ ಪ್ರಶ್ನೆಗೆ ಇನ್ನು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದಾಗಿದೆ.ಯೋಜನೆಗೆ ಸೇರಲಿವೆ ಹೊಸ ನಿಯಮ: ಗುತ್ತಿಗೆ ನೀಡುವ ಸರ್ಕಾರದ ಯೋಜನೆಯಲ್ಲಿ ಈಗಾಗಲೇ ಇರುವ ಹಲವು ನಿಯಮಗಳು ಪರಿಷ್ಕರಣೆಗಳಲ್ಲಿವೆ ಎಂಬುದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ಮಾತು. ಸದ್ಯ ಗೋಮಾಳ ಭೂಮಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಿರುವ ಭೂಮಿಗೂ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಇಂದಿನ ವಿರೋಧ ಪಕ್ಷದ ನಾಯಕರು ಈಗಾಗಲೇ ಡೀಮ್ಡ್ ಅರಣ್ಯ ಎಂದು ಗುರುತಿಸಿರುವ ೬ ಲಕ್ಷ ಹೆಕ್ಟೇರ್‌ ಭೂಮಿ ವಾಪಸ್‌ ಪಡೆಯಲು ಒತ್ತಡ ಹೇರಿರುವುದು ಬೆಳೆಗಾರರ ಆಸೆ ಜೀವಂತ ಇರುವಂತೆ ಮಾಡಿದೆ.

------------------------------------* ಹೇಳಿಕೆ 1

ಡೀಮ್ಡ್ ಹಾಗೂ ಸೆಕ್ಷನ್ ೪ರ ವ್ಯಾಪ್ತಿಯಲ್ಲಿ ಸರ್ವೇ ನಂಬರ್‌ ಭಾಗಶಃ ಇದ್ದರೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಂಪೂರ್ಣ ಸರ್ವೇ ನಂಬರ್ ಸರ್ಕಾರಿ ಎಂದಿದ್ದರೆ ಅರ್ಜಿ ಸಲ್ಲಿಕೆ ಅಸಾಧ್ಯ.

ಮೇಘನಾ, ತಹಸೀಲ್ದಾರ್‌ ಸಕಲೇಶಪುರ * ಹೇಳಿಕೆ 2

ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಸರ್ಕಾರದ ಯೋಜನೆ ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲ ಬೆಳೆಗಾರರು ಸದುಪಯೋಗ ಪಡಿಸಿಕೊಳ್ಳಬೇಕು.

- ಡಾ.ಎಚ್.ಟಿ ಮೋಹನ್‌ ಕುಮಾರ್, ಅಧ್ಯಕ್ಷ ಕರ್ನಾಟಕ ಬೆಳೆಗಾರರ ಒಕ್ಕೂಟ