ಪೂರ್ವಜರ ಪ್ರತಿಫಲ ಕಾಸ್ಮಸ್‌ ಕ್ಲಬ್‌: ಶಾಸಕ ಅರವಿಂದ ಬೆಲ್ಲದ

| Published : Dec 30 2024, 01:01 AM IST

ಪೂರ್ವಜರ ಪ್ರತಿಫಲ ಕಾಸ್ಮಸ್‌ ಕ್ಲಬ್‌: ಶಾಸಕ ಅರವಿಂದ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಒಂದು ಸಂಸ್ಥೆ ಪ್ರಾರಂಭಿಸುವುದು ಮುಖ್ಯವಲ್ಲ. ಬದಲಿಗೆ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಮುಖ್ಯ. ಈ ನಿಟ್ಟಿನಲ್ಲಿ ಕಾಸ್ಮಸ್ ಕ್ಲಬ್ ಆಡಳಿತ ಮಂಡಳಿ ಆಯಾ ಕಾಲಕ್ಕೆ ತಕ್ಕಂತೆ ಅಗತ್ಯ ಸೌಲಭ್ಯ ಒದಗಿಸುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಧಾರವಾಡ:

ಪೂರ್ವಜರು ಭವಿಷ್ಯದ ಚಿಂತನೆ ಮಾಡಿ ಕಾಸ್ಮಸ್ ಕ್ಲಬ್ ಪ್ರಾರಂಭಿಸಿದ್ದು, ಇಂದು ಅದು ಶತಮಾನೋತ್ಸವ ಕಂಡಿರುವುದು ಜಿಲ್ಲೆಯ ಹೆಮ್ಮೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿಯ ಜೆಎಸ್‌ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಕಾಸ್ಮಸ್ ಕ್ಲಬ್ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಒಂದು ಊರು ಪೂರ್ಣವಾಗಲು ಕೇವಲ ಅಲ್ಲಿ ಎಲ್ಲ ರೀತಿಯ ಸೌಲಭ್ಯವಿದ್ದರೆ ಸಾಲದು. ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡಾಂಗಣ ಅವಶ್ಯ. ಇದನ್ನು ಅರಿತುಕೊಂಡಿದ್ದ ಪೂರ್ವಜರು ೧೯೨೪ರಲ್ಲಿಯೇ ಕಾಸ್ಮಸ್ ಕ್ಲಬ್ ಪ್ರಾರಂಭಿಸಿದ್ದರು ಎಂದರು.ಯಾವುದೇ ಒಂದು ಸಂಸ್ಥೆ ಪ್ರಾರಂಭಿಸುವುದು ಮುಖ್ಯವಲ್ಲ. ಬದಲಿಗೆ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಮುಖ್ಯ. ಈ ನಿಟ್ಟಿನಲ್ಲಿ ಕಾಸ್ಮಸ್ ಕ್ಲಬ್ ಆಡಳಿತ ಮಂಡಳಿ ಆಯಾ ಕಾಲಕ್ಕೆ ತಕ್ಕಂತೆ ಅಗತ್ಯ ಸೌಲಭ್ಯ ಒದಗಿಸುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದಿನ ಎಲ್ಲ ಆಡಳಿತ ಮಂಡಳಿಯ ಶ್ರಮದ ಫಲವಾಗಿ ಇಂದು ತನ್ನ ಮೂಲ ಸತ್ವ ಉಳಿಸಿಕೊಂಡು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.ನಮ್ಮ ಆಡಳಿತ ಅವಧಿಯಲ್ಲಿ ಐಐಟಿ, ಐಐಐಟಿ, ಪೊಲೀಸ್ ತರಬೇತಿ ಕೇಂದ್ರ, ಉನ್ನತ ಶಿಕ್ಷಣ ಅಕಾಡೆಮಿ... ಹೀಗೆ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ತರಲಾಯಿತು. ಆದರೆ, ಇಲ್ಲಿಯ ಕ್ರೀಡಾಪಟುಗಳಿಗೆ ಸೂಕ್ತ ಕ್ರೀಡಾ ಸಂಕೀರ್ಣ ಇದ್ದಿಲ್ಲ. ಇದನ್ನು ಮನಗಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದಲ್ಲಿ ₹ ೩೬ ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಕ್ರೀಡಾ ಸಂಕೀರ್ಣ ಅಭಿವೃದ್ಧಿಪಡಿಸುತ್ತಿದ್ದೇನೆ ಎಂದರು.

ಕಾಸ್ಮಸ್ ಕ್ಲಬ್ ಉತ್ತಮ ರಾಷ್ಟ್ರೀಯ ಕ್ರೀಡಾಪಟುಗಳನ್ನು ನೀಡುತ್ತಿದೆ. ಸದ್ಯ ೧೨೯ ಜನ ಮಾತ್ರ ಸದಸ್ಯರಿದ್ದಾರೆ ಎನ್ನಲಾಗಿದೆ. ಸದಸ್ಯರ ಸಂಖ್ಯೆ ಮತ್ತಷ್ಟು ಹೆಚ್ಚಿಸುವ ಜತೆಗೆ ಹೆಚ್ಚಿನ ಕ್ರೀಡಾಪಟುಗಳಿಗೆ ಇದರ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದರು.

ಸನ್ಮಾನ ಸ್ವೀಕರಿಸಿದ ವಕೀಲ ವಿ.ಡಿ. ಕಾಮರೆಡ್ಡಿ ಮಾತನಾಡಿ, ಹಿಂದಿನ ದಿನಗಳಲ್ಲಿ ಕ್ಲಬ್ ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇತ್ತು. ಆದರೆ, ಕಾಸ್ಮಸ್ ಕ್ಲಬ್ ಇವೆಲ್ಲವುಗಳನ್ನು ಮೀರಿ ಜನರ ಮನ್ನಣೆ ಗಳಿಸುವ ಜತೆಗೆ ಜನರ ಭಾಗವಾಗಿ ರೂಪುಗೊಂಡಿದೆ ಎಂದರು.

ಇದಕ್ಕೂ ಪೂರ್ವದಲ್ಲಿ ಶಾಸಕ ಅರವಿಂದ ಬೆಲ್ಲದ ಕ್ಲಬ್‌ನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕ್ಲಬ್‌ ಅಧ್ಯಕ್ಷ ನಿತಿನ ಟಗರಪುರ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಅಧ್ಯಕ್ಷರಾದ ಡಿ.ಎ. ಚಿಪ್ರೆ, ಎ.ಸಿ. ಪುರದ, ಎನ್.ವಿ. ಬಿದರಿಮಠ, ಸಿ.ವಿ. ಮರದ, ಟಿಟಿ ಕೋಚ್ ರವಿ ನಾಯಕ, ಕ್ರಿಕೆಟ್ ಕೋಚ್ ಎನ್.ಕೆ.ಎಲ್. ಮಾಡೂಳ್ಳಿ, ರವಿ ಗಾಂವಕರ, ಕ್ಲಬ್ ಪದಾಧಿಕಾರಿಗಳಾದ ಎಂ.ಎಂ. ಹಿರೇಮಠ, ಅಶೋಕ ಹಿರೇಮಠ, ಎಸ್.ಎಂ. ರುದ್ರಸ್ವಾಮಿ, ಎಸ್.ಬಿ. ಕಿತ್ತೂರ, ವಿಜಯ ಸುಣಗಾರ, ಎಂ.ಎಸ್. ಹಾಲಭಾವಿ, ಅಜ್ಜಯ್ಯ ಗುಡ್ಡದಮಠ, ಸಿ.ಎಚ್. ಜೋಗಿಹಳ್ಳಿ, ಬಿ.ಎನ್. ಜಮಖಂಡಿ, ಎಚ್.ಎಫ್. ಹೆಬ್ಬಾಳ ಸೇರಿದಂತೆ ಇತರರು ಇದ್ದರು.

ಆನಂತರ ಸಂಗೀತಾ ಕಟ್ಟಿ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕಲಕೇರಿ ಸಂಗೀತ ಶಾಲೆ ಮಕ್ಕಳು ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು.