ನಮ್ಮ ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗದೇ ರೈತರು ಸದಾ ಕಾಲ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರೈತರು ಸಾಲ ಸೌಲಭ್ಯ ಪಡೆದು ಉಪ ಕಸುಬನ್ನಾಗಿ ಕುರಿ, ಮೇಕೆ, ಹಸು ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಶಾಶ್ವತ ಬರಪೀಡಿತ ಪ್ರದೇಶವಾಗಿದೆ, ಈ ಕ್ಷೇತ್ರದಲ್ಲಿ ಎಸ್ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಬಡ ರೈತರು ಹಾಗೂ ಕೂಲಿಕಾರ್ಮಿಕರು ಹೆಚ್ಚಿದ್ದು, ಶಾಸಕ ಕೆ.ಎನ್.ರಾಜಣ್ಣ ಅವರು ಹೆಚ್ಚು ಸಾಲ ಸೌಲಭ್ಯ ನೀಡಿ ಈ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ ತಿಳಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕುಣಿಗಲ್ ಶಾಸಕ ರಂಗನಾಥ್ ಅವರು, ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಎನ್.ರಾಜಣ್ಣ ಮಧುಗಿರಿ ತಾಲೂಕಿಗೆ ಹೆಚ್ಚು ಸಾಲ ನೀಡಿದ್ದಾರೆ ಎಂದು ಆರೋಪ ಮಾಡಿರುವುದು ಸರಿಯಲ್ಲ, ಅಲ್ಲದೆ ಇದನ್ನೇ ನೆಪ ಮಾಡಿಕೊಂಡು ಶಾಸಕ ರಂಗನಾಥ್ ಅವರ ಹಿಂಬಾಲಕರು ನಮ್ಮ ಶಾಸಕರ ಬಗ್ಗೆ ಲಘುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇದು ಇಲ್ಲಿಗೆ ನಿಲ್ಲಬೇಕು. ನಮ್ಮಲ್ಲಿ ಬಡತನವಿದೆ, ಅದನ್ನು ಹೋಗಲಾಡಿಸಲು ಸಾಲ ಕೊಟ್ಟಿದ್ದಾರೆ. ತಾವೂ ಸಹ ನಮ್ಮ ಪಕ್ಷದವರೇ ಆಗಿದ್ದು, ಶಾಸಕ ರಂಗನಾಥ್ ರ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ರಾಜ್ಯದಲ್ಲೇ ತುಮಕೂರು ಡಿಸಿಸಿ ಬ್ಯಾಂಕ್ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಸಕ್ರಿಯವಾಗಿ ರೈತರ ಪರ ಕಾರ್ಯ ನಿರ್ವಹಿಸುತ್ತಿದ್ದು, ಕುಣಿಗಲ್ ತಾಲೂಕಿನಲ್ಲಿ 35 ಕೋಟಿ ರು. ಸಾಲ ಮನ್ನಾ ಆಗಿದೆ. ಇದು ರಂಗನಾಥ್ ರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿ, ಕೆ. ಎನ್.ರಾಜಣ್ಣ ಅವರು ಠೇವಣಿ ಸಂಗ್ರಹಿಸಿ ರೈತರಿಗೆ ,ಬಡವರಿಗೆ ಸಾಲ ನೀಡುತ್ತಿದ್ದು, ಇದನ್ನು ಸಹಿಸದ ರಂಗನಾಥ್ ಅವರ ಹೇಳಿಕೆ ಸರಿಯಲ್ಲ, ರಾಜಣ್ಣರಿಗೆ ಒಕ್ಕಲಿಗರ ವಿರೋಧಿ ಎಂದು ಪಟ್ಟ ಕಟ್ಟುವವರಿಗೆ ನಾಚಿಕೆ ಆಗಬೇಕು. ನಿಮ್ಮ ಉಪಟಳ ಇಲ್ಲಿಗೆ ನಿಲ್ಲಿಸಬೇಕು. ರಾಜಣ್ಣ ಅವರ ಘನತೆಗೆ ಧಕ್ಕೆ ಉಂಟಾದರೆ ಅಹಿಂದ ವರ್ಗ ಜಿಲ್ಲೆಯಾದ್ಯಂತ ಶಾಸಕ ರಂಗನಾಥ್ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗದೇ ರೈತರು ಸದಾ ಕಾಲ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರೈತರು ಸಾಲ ಸೌಲಭ್ಯ ಪಡೆದು ಉಪ ಕಸುಬನ್ನಾಗಿ ಕುರಿ, ಮೇಕೆ, ಹಸು ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳದ ಕುಣಿಗಲ್ ಶಾಸಕ ರಂಗನಾಥ್ ದುರುದ್ದೇಶದ ರಾಜಕಾರಣ ಮಾಡಲು ಹೊರಟಿದ್ದಾರೆ, ಇದು ಖಂಡನಾರ್ಹ ಎಂದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಕುಣಿಗಲ್ ಶಾಸಕ ರಂಗನಾಥ್ ಹೇಳಿಕೆ ಹಿಂಪಡೆಯಬೇಕು. ಯಾವುದೇ ಸಾಲ ಸೌಲಭ್ಯ ಪಡೆಯುವಲ್ಲಿ ಒಕ್ಕಲಿಗರು ಆಗ್ರ ಸ್ಥಾನದಲ್ಲಿದ್ದು, ಡಿಸಿಸಿ ಬ್ಯಾಂಕಿನಲ್ಲಿ ಒಕ್ಕಲಿಗ ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗ ನೀಡಿದ್ದು, ಕೆ.ಎನ್.ರಾಜಣ್ಣ ಅವರ ಬಗ್ಗೆ ಟೀಕೆ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆ ಸದಸ್ಯ ಮಂಜುನಾಥ್ ಆಚಾರ್, ಮಾಜಿ ಅಧ್ಯಕ್ಷರಾದ ಕೆ.ಪ್ರಕಾಶ್, ಎಂ.ಕೆ.ನಂಜುಂಡರಾಜು, ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶ್ಯಾಮಣ್ಣ, ಮುಖಂಡರಾದ ಪಿ.ಟಿ.ಗೋವಿಂದಯ್ಯ, ಡಿ.ಎಚ್,ನಾಗರಾಜು.ಸಂಜೀವ್ ಗೌಡ, ಕೆಡಿಪಿ ಸದಸ್ಯ ಹೊಸಕೆರೆ ದೇವರಾಜು, ರಂಗಪ್ಪ, ಶ್ರೀನಿವಾಸರೆಡ್ಡಿ ಇತರರಿದ್ದರು.