ಸಾರಾಂಶ
ಕಾರವಾರ: ತಾಲೂಕಿನ ಸೀಬರ್ಡ್ ನೌಕಾನೆಲೆಯಿಂದ ಕಾರ್ಮಿಕರನ್ನು ಕರೆದೊಯ್ಯುವ ಖಾಸಗಿ ಬಸ್ ಚಕ್ರಕ್ಕೆ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕ ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ನೌಕಾನೆಲೆ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಕಾರ್ಮಿಕರು ವಾಪಸ್ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಹತ್ತುವ ಭರದಲ್ಲಿ ಪಶ್ಚಿಮ ಬಂಗಾಳ ಮೂಲದ ಜಸ್ಟಿ ಮಂಡಲ್ ಎನ್ನುವ ಕಾರ್ಮಿಕ ಆಯ ತಪ್ಪಿ ಬಿದ್ದು ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇವರು ನೌಕಾನೆಲೆಯ ೨ನೇ ಹಂತದ ಕಾಮಗಾರಿಯನ್ನು ಗುತ್ತಿಗೆ ಪಡೆದ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರ ಸಂಬಧಿಕರು ಇಲ್ಲಿಯೇ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ₹10 ಲಕ್ಷ ಪರಿಹಾರ ನೀಡುವರೆಗೂ ಶವವನ್ನು ಹಸ್ತಾಂತರಿಸಿಕೊಂಡಿರಲಿಲ್ಲ.ಗುರುವಾರ ಬೆಳಗ್ಗೆ ತಾಲೂಕಿನ ಸಂಕ್ರಬಾಗ ನೌಕಾನೆಲೆ ಗೇಟ್ ಎದುರು ಹೊರ ರಾಜ್ಯದ ಕಾರ್ಮಿಕರಿಗೆ ಬೆಲೆಯೇ ಇಲ್ಲದಂತಾಗಿದ್ದು, ಅನ್ಯಾಯವಾಗುತ್ತಿದೆ ಎಂದು ಕಾರ್ಮಿಕರು ಕೆಲಸಕ್ಕೆ ತೆರಳದೇ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಕಂಪನಿಯಯವರು ಶವವನ್ನು ಪಶ್ಚಿಮ ಬಂಗಾಲಕ್ಕೆ ಸಾಗಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಲ್ಲದೆ ಕಂಪನಿಯಿಂದ ಕಾರ್ಮಿಕ ಕಾಯ್ದೆ ಪ್ರಕಾರದಂತೆ ಸಿಗುವ ₹10 ಲಕ್ಷ ಹಾಗೂ ಇನ್ನಿತರ ಸೌಲಭ್ಯದ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರೂ ತುರ್ತು ಹಣಕ್ಕೆ ಪಟ್ಟು ಹಿಡಿದರು.ಪೊಲೀಸರು ಹಾಗೂ ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರೂ ತಮ್ಮ ನಿಲುವನ್ನು ಸಡಿಲಿಸಿರಲಿಲ್ಲ. ಬಳಿಕ ₹5 ಲಕ್ಷ ನಗದು ನೀಡುವದಾಗಿ ಕಂಪನಿ ಮುಖ್ಯಸ್ಥರು ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಆನೆ ದಾಳಿಗೆ ವಿದೇಶಿ ಪ್ರವಾಸಿಗ ಸಾವು
ಗೋಕರ್ಣ: ಕಳೆದ ಮೂರು ತಿಂಗಳ ಹಿಂದೆ ಗೋಕರ್ಣಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದ ಜರ್ಮನಿ ಪ್ರವಾಸಿಗರೊಬ್ಬರು ತಮಿಳುನಾಡಿನ ಕೊಯಮತ್ತೂರಿಗೆ ಪ್ರವಾಸಕ್ಕಾಗಿ ತೆರಳಿದ್ದ ವೇಳೆ ಆನೆ ದಾಳಿಯಿಂದ ಗುರುವಾರ ಸಾವಿಗೀಡಾಗಿದ್ದಾರೆ.ಜರ್ಮನಿಯ ಮೈಕಲ್ (೭೭) ಆನೆ ದಾಳಿಯಿಂದ ಸಾವಿಗೀಡಾದ ವಿದೇಶಿ ಪ್ರವಾಸಿಗ.ಇವರು ಕಳೆದ ೨೫ ವರ್ಷಗಳಿಂದ ಗೋಕರ್ಣಕ್ಕೆ ನಿರಂತರವಾಗಿ ಭೇಟಿ ನೀಡಿ ಹಲವು ತಿಂಗಳು ವಾಸ್ತವ್ಯ ಹೂಡುತ್ತಿದ್ದರು. ಅದೇ ರೀತಿ ಈ ಬಾರಿಯೂ ಕಳೆದ ಮೂರು ತಿಂಗಳ ಹಿಂದೆಯೇ ಆಗಮಿಸಿ ಗೋಕರ್ಣದಲ್ಲಿ ವಾಸ್ತವ್ಯ ಹೂಡಿದ್ದರು. ಇತ್ತೀಚೆಗೆ ತಮಿಳುನಾಡಿಗೆ ಪ್ರವಾಸಕ್ಕಾಗಿ ತೆರಳಿದ್ದರು. 2 ದಿನದಲ್ಲಿ ತಮಿಳುನಾಡು ಪ್ರವಾಸ ಮುಗಿಸಿ ಗೋಕರ್ಣಕ್ಕೆ ವಾಪಸ್ ಬರುವವರಿದ್ದರು. ಆದರೆ ಗುರುವಾರ ಆನೆ ದಾಳಿಯಿಂದ ಮೈಕಲ್ ಮೃತಪಟ್ಟಿದ್ದಾರೆ. ಗೋಕರ್ಣದ ಅನೇಕರಿಗೆ ಆತ್ಮೀಯ ಒಡನಾಟ ಹೊಂದಿದ್ದ ಮೈಕಲ್ ನಿಧನವು ಆಘಾತ ತಂದಿದೆ.