ಸಾರಾಂಶ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಪ್ರೇರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವರ್ಷಾನುಗಟ್ಟಲೇ ಪಾಲಕರ ಪರಿಶ್ರಮ ಹಾಗೂ ಶಿಕ್ಷಕರ ಬೋಧನೆಗೆ ವಿದ್ಯಾರ್ಥಿಗಳು ಅಧ್ಯಯನ ಮೂಲಕ ಬೆಲೆ ಕೊಡ ಬೇಕು. ಅಂತಿಮ ಪರೀಕ್ಷೆಯಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸದ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ಸಾಯಿ ಏಂಜೆಲ್ಸ್ ಪಿಯು ಕಾಲೇಜು ಹಾಗೂ ಕುವೆಂಪು ಯೂನಿವರ್ಸಿಟಿ ಯೂನಿಯನ್ ಸಹಯೋಗದಲ್ಲಿ ಗುರುವಾರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಪರೀಕ್ಷೆ ಕುರಿತು ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂತಿಮ ವರ್ಷದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಾರಾತ್ಮಕ ಚಿಂತನೆಗಳು ಸಹಜ. ಎಲ್ಲವನ್ನು ಬದಿಗಿರಿಸಿ ಸಕಾರಾತ್ಮಕವಾಗಿ ಯೋಚಿಸಬೇಕು. ಶಾಲೆ ಕ್ರೀಡಾಕೂಟ, ವಾರ್ಷಿಕೋತ್ಸವ ಬಳಿಕ ಅಂತಿಮ ಪರೀಕ್ಷಾ ಘಟ್ಟದಲ್ಲಿ ನಿರಂತರ ಕಲಿಕೆಯಿಂದ ಕೂಡಿದ್ದರೆ ಮಾತ್ರ ಪರೀಕ್ಷಾ ಕೊಠಡಿಗಳಲ್ಲಿ ಯಾವುದೇ ಆತಂಕವಿರುವುದಿಲ್ಲ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳೇ ದೇಶದ ಮುಂದಿನ ಆಸ್ತಿ. ಹಂತ ಹಂತವಾಗಿ ಬೆಳವಣಿಗೆ ಹೊಂದಿ ಸಮಾಜದ ಉನ್ನತ ಸ್ಥಾನ ಅಲಂಕರಿಸಬೇಕು. ವಿದ್ಯೆಯಿಂದಲೇ ಮಕ್ಕಳ ಬದುಕು ಮುಗಿಲೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಹೀಗಾಗಿ ಕಲಿಕೆ ಸಮಯ ದಲ್ಲಿ ಮೊಬೈಲ್, ಟಿವಿಗೆ ಮಾರುಹೋಗದಂತೆ ಎಚ್ಚರ ವಹಿಸಬೇಕು ಎಂದರು.ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳು ಉತ್ತಮ ಅಂಕದಿಂದ ತೇರ್ಗಡೆ ಹೊಂದಿದ್ದರೆ, ಮುಂದಿನ ವ್ಯಾಸಂಗಕ್ಕೆ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ಸೀಟ್‌ಗಳು ಲಭ್ಯವಾಗಿ ಪಾಲಕರಿಗೆ ಲಕ್ಷಾಂತರ ರುಗಳನ್ನು ಉಳಿಸಬಹುದು ಎಂದು ಕಿವಿಮಾತು ಹೇಳಿದರು.ಪರೀಕ್ಷಾ ಕೊಠಡಿಗಳಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪ್ರತಿ ಯೊಬ್ಬರ ಚಲನವಲನ ಇಲಾಖೆ ಕಲೆ ಹಾಕುತ್ತದೆ. ಅಲ್ಲದೇ ವಿದ್ಯಾರ್ಥಿಗಳ ಸಮರ್ಪಕ ಓದಿಗೆ ತಕ್ಕ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಪದ್ಧತಿ ಜಾರಿಗೊಳಿಸಿದೆ ಎಂದರು.ಸೆಂಟ್ ಆಡ್ರಿಸ್ ಚರ್ಚ್‌ನ ಧರ್ಮಗುರು ಸಿ.ಜಾರ್ಜ್ ವಿನೋದ್‌ಕುಮಾರ್ ಮಾತನಾಡಿ, ಪರೀಕ್ಷೆಗಳೆಂದರೆ ಇತ್ತೀಚಿನ ವಿದ್ಯಾರ್ಥಿ ಗಳಲ್ಲಿ ಒಂದೆಡೆ ಆತಂಕ, ಕೆಲವರು ಧೈರ್ಯವಾಗಿ ಎದುರಿಸುವ ಶಕ್ತಿ ಹೊಂದಿದ್ದಾರೆ. ಅಂತಿಮ ಪರೀಕ್ಷೆಗಳಲ್ಲಿ ಭಯ ಸಹಜ. ಇದನ್ನು ಮೆಟ್ಟಿನಿಲ್ಲಲು ನಿರಂತರ ವಿದ್ಯಾಭ್ಯಾಸವೇ ದೊಡ್ಡ ಅಸ್ತ್ರ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಾಯಿಏಂಜೆಲ್ಸ್ ಪಿಯು ಕಾಲೇಜು ಪ್ರಾಂಶುಪಾಲ ಕೆ.ಕೆ.ನಾಗರಾಜ್, ಉಪನ್ಯಾಸಕ ಕುಮಾರಸ್ವಾಮಿ, ಕುವೆಂಪು ಯೂನಿವರ್ಸಿಟಿ ಯೂನಿಯನ್ ಕಾರ್ಯದರ್ಶಿ ಎನ್.ರಕ್ಷಿತ್, ಟಿಪ್ಪುಸುಲ್ತಾನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಂಶೀದ್ ಖಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಸಾದ್ ಅಮೀನ್, ಬಸವನಹಳ್ಳಿ ಬಾಲಕಿಯರ ಶಾಲೆ ಪ್ರಾಂಶುಪಾಲರಾದ ಇಂದ್ರಮ್ಮ, ಶಿಕ್ಷಕ ಮಧು ಉಪಸ್ಥಿತರಿದ್ದರು.6 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಪರೀಕ್ಷೆ ಕುರಿತು ಪ್ರೇರಣಾ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಉದ್ಘಾಟಿಸಿದರು. ಕೃಷ್ಣಮೂರ್ತಿ ರಾಜ್ ಅರಸ್, ಕೆ.ಕೆ. ನಾಗರಾಜ್, ಜಂಶೀದ್ ಖಾನ್ ಇದ್ದರು.