ಸಾರಾಂಶ
ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಭಾರತ ಹುಣ್ಣಿಮೆಯಂದು ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಸಿಂಧನೂರು: ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಭಾರತ ಹುಣ್ಣಿಮೆಯಂದು 54ನೇ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಬೆಟ್ಟದ ಮೇಲಿರುವ ಲಕ್ಷ್ಮೀ ಬಂಡೆ ರಂಗನಾಥನಿಗೆ ಬೆಳಗ್ಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಸೇರಿ ಕೈಕಂರ್ಯಗಳು ಜರುಗಿದವು. 282 ದಂಪತಿಗಳಿಂದ ವಿಶೇಷ ಗೋ ಪೂಜೆ, ರಥಾಂಗ ಹೋಮ ನಡೆಯಿತು.ಫೆ.22ರಂದು ಗರುಡದ್ವಜಾರೋಹಣ, ಲಕ್ಷ್ಮೀ ಸತ್ಯನಾರಾಯಣ ಪೂಜೆ, ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆದವು. ಫೆ.23ರಂದು ಬಲಿಪ್ರಸಾದ ಗರುಡವಾಹನೋತ್ಸವ, ಗೋ ಪೂಜೆ ನಡೆಯಿತು.
ಶನಿವಾರ ಸಂಜೆ ರೌಡಕುಂದಾ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಲಕ್ಷ್ಮೀ ಬಂಡೆ ರಂಗನಾಥನ ರಥವನ್ನು ಭಕ್ತಿ ಪರವಶರಾಗಿ ರಥ ಎಳಿದರು.ರಥೋತ್ಸವದಲ್ಲಿ ಭಕ್ತರು ಬಂಡೆರಂಗನಾಥನಿಗೆ ಜೈಕಾರ ಹಾಕುತ್ತಾ ಬಾಳೆಹಣ್ಣು, ಉತ್ತತ್ತಿ ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ, ಕಾರ್ಯದರ್ಶಿ ಮನೋಹರರಾವ್ ಕುಲಕರ್ಣಿ, ಮಠಾಧಿಕಾರಿ ನರಸಿಂಹಾಚಾರ್ ಪುರೋಹಿತ್, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಮುಖಂಡರಾದ ರಮೇಶ ವಟಗಲ್, ಗೋಪಾಲರಾವ್ ಕುಲಕರ್ಣಿ, ಹನುಮೇಶಾಚಾರ್ ಬಾದರ್ಲಿ ಸೇರಿ ಅನೇಕರು ಭಾಗವಹಿಸಿದ್ದರು. ದೇವಸ್ಥಾನದ ಅರ್ಚಕ ಶ್ರೀಧರ ಪೂಜಾರಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು.