ಸಾರಾಂಶ
ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲೆಂದು ಮುಂಬೈನಿಂದ ಇಲ್ಲಿಗೆ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು, ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ವೇಳೆ, ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದಾಗ, ಸ್ಥಳೀಯರ ನೆರವಿನಿಂದ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲೆಂದು ಮುಂಬೈನಿಂದ ಇಲ್ಲಿಗೆ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು, ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ವೇಳೆ, ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದಾಗ, ಸ್ಥಳೀಯರ ನೆರವಿನಿಂದ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರ ಗ್ರಾಮದ ಸೈಯದ್ ಬಾಷಾ ಎಂಬುವರ ಮೇಲೆ ಆರು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಜಮೀನು ವ್ಯಾಜ್ಯ ಸಂಬಂಧ ಈ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಕಾರಿನಲ್ಲಿ ಬಂದು ದಾಳಿ ಮಾಡಿದ ಮುಂಬೈನ ದುಷ್ಕರ್ಮಿಗಳು, ಚಾಕು ಸೇರಿದಂತೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ತುಮಕೂರು ಗ್ರಾಮದ ಇಬ್ರಾಹಿಂ ಎಂಬಾತ ಮುಂಬೈನಿಂದ ಐವರ ಕರೆಯಿಸಿಕೊಂಡು ಸೈಯದ್ ಬಾಷಾ ಮೇಲೆ ಹಲ್ಲೆ ನಡೆಸಿದ್ದಾನೆಂದು ದೂರಲಾಗಿದೆ. ಗಾಯಗೊಂಡ ಸೈಯ್ಯದ್ ಬಾಷಾನನ್ನು ಹೆಚ್ಚಿನ ಚಿಕಿತ್ಸೆಗೆಂದು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಹಲ್ಲೆ ಮಾಡಿ ಕಾರು ಸಮೇತ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಕಾರಿನ ಟೈಯರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿದೆ.ಗಾಯಗೊಂಡು ನರಳಾಡುತ್ತಿದ್ದ ಹಲ್ಲೆಕೋರರನ್ನು ಜನರ ಬಂದು ರಕ್ಷಿಸಿದ್ದಾರೆ. ಕೊನೆಗೆ, ಹಲ್ಲೆ ನಡೆಸಿದ ತಂಡ ಎಂದು ಗೊತ್ತಾಗುತ್ತಲೇ, ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.