ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಭೂಕುಸಿತದ ಸಂದರ್ಭದಲ್ಲಿ ತನ್ನ ಕುಟುಂಬವನ್ನೇ ಕಳೆದುಕೊಂಡಿದ್ದ ಮಡಿಕೇರಿ ನಗರದ ಪಲ್ಲವಿ ಈಗ ಡಾಕ್ಟರೇಟ್ ಪದವಿ ಪಡೆದು ಡಾ. ಪಲ್ಲವಿ ಎನಿಸಿಕೊಂಡಿದ್ದಾರೆ.ಮನದಲ್ಲಿ ಎಷ್ಟೇ ನೋವಿರಲಿ, ಛಲ ಎಂಬುದಿದ್ದರೆ ಖಂಡಿತಾ ಜೀವನದಲ್ಲಿ ಸಾಧನೆ ಸಾಧ್ಯ ಎಂಬುದನ್ನೂ ಪಲ್ಲವಿ ನಿರೂಪಿಸಿದ್ದಾರೆ.
2006ರಲ್ಲಿ ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಕುಟುಂಬಗಳಿಗೆ ಸೇರಿದ 6 ಮಂದಿ ಭೂಸಮಾಧಿಯಾಗಿದ್ದರು. ಭೀಕರ ಭೂಕುಸಿತದಲ್ಲಿ ಕುಸಿದ ಬರೆಯಡಿ ಸಿಲುಕಿ, ತನ್ನ ತಾಯಿ, ತಂಗಿ, ತಮ್ಮನನ್ನು ಕಳೆದುಕೊಂಡರೂ ಪಲ್ಲವಿ ಮಾತ್ರ ಜೀವಂತವಾಗಿ ಉಳಿದಿದ್ದರು.2006ರಲ್ಲಿ ಮಹಾಮಳೆಯ ಸಂದರ್ಭ ಸಂಭವಿಸಿದ ಭೂಕುಸಿತದಲ್ಲಿ ಮಂಗಳಾದೇವಿ ನಗರದಲ್ಲಿ ವಾಸವಾಗಿದ್ದ ಕೂಲಿಕಾರ್ಮಿಕ ಕುಟುಂಬದ ಪಲ್ಲವಿಯ ತಾಯಿ, ತಂಗಿ, ತಮ್ಮ ಮಣ್ಣು ಪಾಲಾಗಿದ್ದರು, ಇದೇ ಭೂಕುಸಿತದಲ್ಲಿ ಮತ್ತೆ ಮೂವರು ಕಾರ್ಮಿಕರೂ ಮೃತಪಟ್ಟಿದ್ದರು. 6 ಮಂದಿಯನ್ನು ಬಲಿತೆಗೆದುಕೊಂಡಿದ್ದ ಈ ಭೂಕುಸಿತ ಕೊಡಗಿನ ಇತಿಹಾಸದಲ್ಲಿಯೇ ಮೊದಲ ಪ್ರಾಕೃತಿಕ ವಿಕೋಪ ಎನಿಸಿಕೊಂಡಿತ್ತು. ತಾಯಿ, ತಂಗಿ, ತಮ್ಮನೊಂದಿಗೆ ನಿದ್ರಿಸುತ್ತಿದ್ದ ಪಲ್ಲವಿ ಅದೃಷ್ಟವಶಾತ್ ಕುಸಿಯುತ್ತಿದ್ದ ಮಣ್ಣಿನಲ್ಲಿಯೇ ಜಾರಿ ಕೆಳಕ್ಕೆ ಬಂದು ಬಿದ್ದಿದ್ದಳು, ಆಗ ಆಕೆಗೆ 16 ವರ್ಷ ವಯಸ್ಸು.
ಪರಿಹಾರದ ಮೊತ್ತದಿಂದ ಭವಿಷ್ಯ: ಭೂಕುಸಿತದಲ್ಲಿ ಮೃತಪಟ್ಟ ಪಲ್ಲವಿಯ ಕುಟುಂಬವೂ ಸೇರಿದಂತೆ ಇತರರ ಸದಸ್ಯರಿಗೆ ಅಂದಿನ ಜಿಲ್ಲಾಧಿಕಾರಿ ಸುಭೋದ್ ಯಾದವ್ ಪ್ರಯತ್ನದಿಂದ ಸರ್ಕಾರದ ಮೂಲಕ 3 ಲಕ್ಷ ರು. ಪರಿಹಾರ ದೊರಕಿತ್ತು. ಅದನ್ನು ಪಲ್ಲವಿ ಹೆಸರಿನಲ್ಲಿಯೇ ಬ್ಯಾಂಕ್ ನಲ್ಲಿ ಠೇವಣಿ ಇರಿಸಲಾಗಿತ್ತು, ಅದೇ ಹಣ ಪಲ್ಲವಿಯ ಭವಿಷ್ಯದ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗಿತ್ತು.ಬೇಬಿ ಮ್ಯಾಥ್ಯು ಮಾರ್ಗದರ್ಶನ: ಭೂಕುಸಿತದಲ್ಲಿ ಬದುಕಿ ಉಳಿದ ಪಲ್ಲವಿ ಪಾಲಿಗೆ ಮಡಿಕೇರಿಯ ಸಮಾಜಸೇವಕ ಕೆ.ಟಿ. ಬೇಬಿ ಮ್ಯಾಥ್ಯು ಪಾಲಕರಾದರು. ಆಕೆಯ ಪಾಲಿಗೆ ಮಾರ್ಗದರ್ಶಕರಾದರು. ಪಲ್ಲವಿಯ ದೊಡ್ಡಪ್ಪ ಸುಂದರ ಎಂಬವರ ಮನೆಯಲ್ಲಿ ಮೂರ್ನಾಡಿನಲ್ಲಿ ಪಲ್ಲವಿ ವಾಸವಾಗಿದ್ದು ಮೂರ್ನಾಡಿನ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದ್ದಳು. ನಂತರ ಮಡಿಕೇರಿಯ ಫೀಲ್ಡ್ ಮಾಷ೯ಲ್ ಕಾರ್ಯಪ್ಪ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಪಲ್ಲವಿ ಈ ಹಂತಗಳಲ್ಲಿಯೂ ಅತ್ಯುತ್ತಮ ಅಂಕ ಗಳಿಸಿದ್ದಳು.
ಸಹಾಯಕ ಪ್ರೊಫೆಸರ್: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆದ ನಂತರ ಬೆಂಗಳೂರಿನ ಜೈನ್ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರಿದ ಪಲ್ಲವಿ ಕೆಲ ವರ್ಷಗಳಿಂದ ಆ ಕಾಲೇಜಿನ ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ.ತನ್ನ ಮನಸ್ಸು ಎಷ್ಟೇ ನೊಂದಿರಲಿ, ತಾಯಿ, ತಮ್ಮ, ತಂಗಿಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದರೂ ಶಿಕ್ಷಣದ ಬಗೆಗಿನ ಒಲವು ಮಾತ್ರ ಪಲ್ಲವಿಯಲ್ಲಿ ನಶಿಸಿರಲಿಲ್ಲ. ಹೀಗಾಗಿಯೇ ಪಿಎಚ್‌ಡಿ ಪಡೆಯಬೇಕೆಂಬ ಛಲದಿಂದ ‘ಭಾರತೀಯ ದೃಷ್ಟಿಕೋನದಿಂದ ಬ್ಯಾಂಕಿಂಗ್ ಇನ್ಯೂರೆನ್ಸ್’ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಿದರು. ಇದೀಗ ಈ ವಿಷಯಕ್ಕಾಗಿ ಮಂಗಳೂರು ವಿ,ವಿ ಡಾಕ್ಟೋರೇಟ್ ಪದವಿ ನೀಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಅನುಸೂಯ ರೈ ಮಾರ್ಗದರ್ಶನದಲ್ಲಿ ಈಕೆ ಪ್ರಬಂಧ ಸಿದ್ಧಪಡಿಸಿದ್ದರು.
..............ಜೀವನದಲ್ಲಿ ಸಾಧಿಸಬೇಕೆಂಬ ಛಲದಿಂದ ಈ ಸಂಶೋಧನೆಗೆ ಏಳು ವರ್ಷದಿಂದ ಶ್ರಮಪಟ್ಟಿದ್ದೇನೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ನನ್ನ ಕುಟುಂಬ ಇಂದು ಇಲ್ಲದಿರಬಹುದು. ಆದರೆ ಅಮ್ಮನ ಆಸೆ ಈಡೇರಿಸಿದ ಖುಷಿಯಿದೆ. ನೋವು ಕೊನೆಯ ತನಕ ಇದ್ದೇ ಇರುತ್ತದೆ.-ಪಲ್ಲವಿ, ಸಹಾಯಕ ಪ್ರಾಧ್ಯಾಪಕರು ಜೈನ್ ಕಾಲೇಜು ಬೆಂಗಳೂರು.
...................ಪಲ್ಲವಿ ಅವರು ಮಂಗಳೂರು ವಿ.ವಿ ಕಾಲೇಜಿನಲ್ಲಿ 2010-12ನೇ ಬ್ಯಾಚಿನಲ್ಲಿ ಎಂ.ಕಾಂ. ವ್ಯಾಸಂಗ ಮಾಡಿದ್ದರು. ಆಗಿನಿಂದ ಆಕೆಯ ಪರಿಚಯ ಇದೆ. ಪ್ರಾಕೃತಿಕ ದುರಂತದಲ್ಲಿ ವೈಯಕ್ತಿಕವಾಗಿ ಕಷ್ಟಗಳನ್ನು ಕಂಡರೂ ಆಕೆ ಕಲಿಯುವಿಕೆಯಲ್ಲಿ ಧೃತಿಗೆಡಲಿಲ್ಲ. ಬದುಕಿನಲ್ಲಿ ಹೋರಾಟ ಮಾಡಿಕೊಂಡೇ ಇಂದು ಡಾಕ್ಟರೇಟ್ ಪದವಿಯನ್ನೂಪಡೆದಿದ್ದು, ಬೆಂಗಳೂರಿನಲ್ಲಿ ಉತ್ತಮ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆಯ ಭವಿಷ್ಯ ಉಜ್ವಲವಾಗಿದೆ.-ಡಾ.ಅನಸೂಯಾ ರೈ, ಪಲ್ಲವಿ ಪಿಎಚ್‌ಡಿ ಮಾರ್ಗದರ್ಶಕರು, ನಿವೃತ್ತ ಪ್ರಾಂಶುಪಾಲೆ.