ನರಗುಂದ: 1980ರ ಜುಲೈ 21ರಂದು ನಡೆದ ರೈತ ಚಳವಳಿಯಲ್ಲಿ ಪ್ರಾಣತ್ಯಾಗ ಮಾಡಿದ ಚಿಕ್ಕ ನರಗುಂದ ಗ್ರಾಮದ ರೈತ ಈರಪ್ಪ ಕಡ್ಲಿಕೊಪ್ಪ ಅವರ ಹೆಸರಿನ ವೀರಗಲ್ಲು ಸ್ಥಾಪನೆಗೆ ಜಾಗದ ಮಾಲೀಕರು ಒಪ್ಪಿಗೆ ಪತ್ರ ನೀಡಿದ್ದಾರೆ. ಹೀಗಾಗಿ ವೀರಗಲ್ಲು ಸ್ಥಾಪನೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ.

ತಾಲೂಕು ದಂಡಾಧಿಕಾರಿ ಶ್ರೀಶೈಲ ತಳವಾರ, ಉಪ ಅಧಿಕ್ಷಕ ಪ್ರಭುಗೌಡ ಕಿರೇದಹಳ್ಳಿ, ಸಿಪಿಐ ಮಾಳಗೊಂಡ ಅವರ ಮಧ್ಯಸ್ಥಿಕೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಜಾಗದ ಮಾಲೀಕರಾದ ಸಂಗನಗೌಡ ವೀರನಗೌಡ, ಎಂ.ಬಿ. ಕುಲಕರ್ಣಿ, ಸಲೀಂ ಮೇಗಲಮನಿ, ದೇಸಾಯಿಗೌಡ ಪಾಟೀಲ ಅವರು ವೀರಗಲ್ಲು ಸ್ಥಾಪನೆಗೆ ಜಾಗ ನೀಡಲು ಲಿಖಿತ ಒಪ್ಪಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ವೀರಗಲ್ಲು ಸ್ಥಾಪನೆಗೆ ಮಹತ್ವದ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.

ವೀರಗಲ್ಲು ಸ್ಥಾಪನೆಗೆ ಹಲವು ವರ್ಷಗಳಿಂದ ರೈತರು ಒತ್ತಾಯಿಸುತ್ತಿದ್ದರು. ಗದಗ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಕಳೆದ ವರ್ಷ ಹುತಾತ್ಮ ದಿನಾಚರಣೆಯಂದು ಸರ್ಕಾರದಿಂದಲೇ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಸ್ಥಳ ಖಾಸಗಿ ಮಾಲೀಕತ್ವದಲ್ಲಿತ್ತು. ನಾಲ್ವರು ಜಾಗದ ಮಾಲೀಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ವೀರಗಲ್ಲು ಸ್ಥಾಪನೆಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಸಂಧಾನ ಸಭೆ ನಡೆಸಿ, ಮಾಲೀಕರ ಒಪ್ಪಿಗೆ ಪಡೆಯಲಾಯಿತು.

ವೀರಗಲ್ಲು ಸ್ಥಾಪನೆಗೆ ರೈತರೇ ₹40 ಸಾವಿರ ವಂತಿಗೆ ಸಂಗ್ರಹಿಸಿದ್ದಾರೆ. ಸರ್ಕಾರದಿಂದ ಅನುದಾನ ಬಂದರೂ ಸಾರ್ವಜನಿಕರಿಂದ ಪಡೆದ ಹಣ ವೀರಗಲ್ಲು ಸ್ಥಾಪನೆ ಕಾರ್ಯಕ್ಕೆ ನೀಡಲು ರೈತ ನಾಯಕರು ನಿರ್ಣಯ ಮಾಡಿದರು.

ರೈತ ಮುಖಂಡರಾದ ಶಂಕ್ರಣ್ಣ ಅಂಬಲಿ, ಶಂಕರಗೌಡ ಪಾಟೀಲ, ಬಸವರಾಜ ಸಾಬಳೆ, ದೇವಪ್ಪ ಬಂಗಾರಿ, ಪ್ರವೀಣ ಯರಗಟ್ಟಿ, ಸಿದ್ದಲಿಂಗಪ್ಪ ಮಾಳನ್ನವರ, ಭರಮಪ್ಪ ಚಲವಾದಿ, ಸಿದ್ದಪ್ಪ ಜಾವೂರ, ವಿಠ್ಠಲ ಜಾಧವ, ಉಮೇಶ ಮರ್ಚಕ್ಕನವರ, ನಾಗೇಶ ಅಷ್ಟೋಜಿ, ಈರಣ್ಣ ಸೊಪ್ಪಿನ, ಹನುಮಂತಗೌಡ ಕರಿಗೌಡ, ಕಾಡಪ್ಪ ತುಳಸಿಕಟ್ಟಿ ಇದ್ದರು.