ಹಳೆಯ ಪಿಂಚಣಿ ಯೋಜನೆಯನ್ನು ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೂ ವಿಸ್ತರಿಸುವಂತೆ ಒತ್ತಾಯಿಸಿ ಹಾವೇರಿಯ ಎಂ.ಎಂ. ವೃತ್ತದಲ್ಲಿ ಮಾಧ್ಯಮಿಕ ಶಾಲಾ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು.

ಹಾವೇರಿ: ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಮರು ಜಾರಿಗೊಳಿಸುವುದು ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೂ ವಿಸ್ತರಿಸುವಂತೆ ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಅನುದಾನಿತ ಶಾಲಾ-ಕಾಲೇಜುಗಳ 2006 ಏ.1ರ ನಂತರ ನೇಮಕಗೊಂಡ ನೂರಾರು ಶಿಕ್ಷಕರು ಮತ್ತು ಬೋಧಕೇತರ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಹುಕ್ಕೇರಿಮಠದಿಂದ ಆರಂಭವಾದ ಪ್ರತಿಭಟನಾ ಜಾಥಾವು ಎಂ.ಜಿ. ರಸ್ತೆ, ಗಾಂಧಿ ಸರ್ಕಲ್, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಸಂಚರಿಸಿ ಎಂ.ಎಂ. ವೃತ್ತದಲ್ಲಿ ಸಮಾವೇಶಗೊಂಡಿತು. ಜಾಥಾದುದ್ದಕ್ಕೂ `ಒಪಿಎಸ್ ಜಾರಿಗೊಳಿಸಿ`, `ನೌಕರ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ಎಚ್.ಪಿ.ಬಣಕಾರ ಮಾತನಾಡಿ, ಈ ಹೋರಾಟ ಇಲ್ಲಿಗೆ ಮುಗಿದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಮುಂದುವರಿಯಲಿದೆ. ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ಮಾಡುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ. ಹಾವೇರಿಯಿಂದ ಬೆಂಗಳೂರುವರೆಗೆ 10 ದಿನಗಳ ಕಾಲ ಪಾದಯಾತ್ರೆ ನಡೆಸುವ ಚಿಂತನೆ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಆರ್.ಎಚ್. ಬೆಟ್ಟಳ್ಳೇರ ಮಾತನಾಡಿ, ಈಗಾಗಲೇ ತಾಲೂಕು ಹಂತದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೇವೆ. 2006 ಏ.1ರ ನಂತರ ನೇಮಕವಾದ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯಿಂದ ನೌಕರರ ಭವಿಷ್ಯಕ್ಕೆ ಯಾವುದೇ ಭದ್ರತೆ ಇಲ್ಲ. ಸರ್ಕಾರಿ ನೌಕರರಿಗೆ ಒಂದು ನಿಯಮ, ಅನುದಾನಿತ ನೌಕರರಿಗೆ ಇನ್ನೊಂದು ನಿಯಮ ಸರಿಯಲ್ಲ. ಇದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, 2006ರ ನಂತರ ನೇಮಕಗೊಂಡ ನೌಕರರು 30-35 ವರ್ಷ ಸೇವೆ ಸಲ್ಲಿಸಿದರೂ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯಕ್ಕೆ ಹಣ ಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿವೃತ್ತಿಯ ನಂತರ ಬಡತನದ ಜೀವನ ನಡೆಸುವಂತಾಗಿದೆ. ಎನ್‌ಪಿಎಸ್‌ನಿಂದ ಬರುವ ಅಲ್ಪ ಮೊತ್ತದಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಜಾಥಾಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಣ್ಣದಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎನ್. ಕುಂದೂರ, ಜಿ.ಕೆ. ಹಿತ್ತಮನಿ, ಮಲ್ಲೇಶ ಕರಿಗಾರ, ಮಲ್ಲಿಕಾರ್ಜುನ ಶಾಂತಗಿರಿ, ಪಿ.ಐ. ಗಚ್ಚಿನಮನಿ, ಎಸ್.ಎಸ್. ನಿಸ್ಸೀಮಗೌಡ್ರ, ಬಿ.ಎಂ. ಜಗಾಪುರ, ಗೀತಾ ಸುತ್ತಕೋಟಿ, ಸುರೇಶ ಕಲ್ಮನಿ, ಮಾಲತೇಶ ನಲವಾಗಲ, ಎಫ್.ಎಚ್. ಮರಡೂರ, ಎಂ.ಬಿ. ರಮೇಶ, ಮಾಲತೇಶ ಮುದಕಪ್ಪನವರ, ಜಿ.ಪಿ. ಹೊಸಗೌಡ್ರ, ಪಿ.ಡಿ.ಲಂಗೋಟಿ, ಎಂ.ಎಸ್.ಕೆಂಚನಗೌಡ್ರ, ಎಸ್.ಎಲ್. ಕಾಡದೇವರಮಠ, ಎಸ್.ಡಿ. ಪರಡ್ಡಿ, ಶಿವಬಸವ ಮರಳಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ನೌಕರರು ಪಾಲ್ಗೊಂಡಿದ್ದರು.

ವಿವಿಧ ಸಂಘಟನೆಗಳ ಬೆಂಬಲ: ಪ್ರತಿಭಟನೆಗೆ ಸಹ ಶಿಕ್ಷಕರ ಸಂಘ, ಪದವಿ ಪೂರ್ವ ಉಪನ್ಯಾಸಕರ ಸಂಘ, ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಸಂಘ, ಐಟಿಐ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಈ ಸಂಘಟನೆಗಳ ಮುಖಂಡರು ಮಾತನಾಡಿ, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಜಾರಿಗೊಳಿಸಿದಾಗ ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಯಾಕಿಲ್ಲ? ಇದು ಸ್ಪಷ್ಟ ತಾರತಮ್ಯ. ನೌಕರರ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ನಾವೆಲ್ಲರೂ ಜೊತೆಗೂಡಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಸರ್ಕಾರ ನೌಕರರ ಪರ ಇದೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರ ನೌಕರರ ಪರವಾಗಿದೆ. ಮಾಧ್ಯಮಿಕ ಶಾಲಾ ನೌಕರರ ಸಂಘದ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಜಿಲ್ಲೆಯ ಆರು ಜನ ಶಾಸಕರ ಗಮನಕ್ಕೆ ತರಲಾಗುವುದು. ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಅಧಿವೇಶನದಲ್ಲಿ ಒಪಿಎಸ್ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.