ಬಿ.ಎಡ್‌ನಿಂದ ಭಾಷಾಶೈಲಿ ವೃದ್ಧಿ

| Published : Mar 30 2025, 03:04 AM IST

ಸಾರಾಂಶ

ಬಿ.ಎಡ್‌ ಅಧ್ಯಯನ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸ್ಪರ್ಧಾತ್ಮಕ ಕೌಶಲ್ಯ, ಉತ್ತಮ ಭಾಷಾ ಶೈಲಿ ಜೊತೆಗೆ ಸಂಪರ್ಕ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ನಿರೀಕ್ಷಕ ಸೈಯದ್‌ ಫುರಖಾನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬಿ.ಎಡ್‌ ಅಧ್ಯಯನ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸ್ಪರ್ಧಾತ್ಮಕ ಕೌಶಲ್ಯ, ಉತ್ತಮ ಭಾಷಾ ಶೈಲಿ ಜೊತೆಗೆ ಸಂಪರ್ಕ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ನಿರೀಕ್ಷಕ ಸೈಯದ್‌ ಫುರಖಾನ್‌ ತಿಳಿಸಿದರು.ನಗರದ ಬಸವೇಶ್ವರ ಬಿ.ಎಡ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಬಿ.ಎಡ್‌ ನಂತರ ಒಬ್ಬ ಶಿಕ್ಷಕನು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಇಡೀ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿರುತ್ತಾನೆ. ಜೊತೆಗೆ ವಿವಿಧ ಭಾಷೆಗಳನ್ನು ಕಲಿಯುವುದರ ಮೂಲಕ ಭಾಷಾ ಅಭಿಮಾನ, ಪ್ರಭುತ್ವ ಹೊಂದಬೇಕೆಂದರು.ನಿವೃತ್ತ ಉಪನ್ಯಾಸಕ ಪ್ರೊ. ಉಮಾಕಾಂತ ಪಾಟೀಲ್‌ ಮಾತನಾಡಿ, ಆಧುನಿಕ ಯುಗದಲ್ಲಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವಂತಹ ಕೆಲಸ ಭಾಷೆಯ ಮೂಲಕ ಆಗುತ್ತದೆ. ಶಿಕ್ಷಕರ ಬೋಧನಾ ಸಾಮರ್ಥ್ಯಗಳು ಅವರು ಹೊಂದಿರುವಂತಹ ಭಾಷಾ ಪ್ರಭುತ್ವವನ್ನು ಅವಲಂಬಿಸಿರುತ್ತದೆ ಎಂದರು.ಬೋಧನಾ ಕಾರ್ಯದ ಸಫಲತೆಯು ಶಿಕ್ಷಕರು ಹೊಂದಿರುವ ಭಾಷಾ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಬ್ಬ ಶಿಕ್ಷಕನು ನಿತ್ಯ ಉತ್ತಮ ಓದುಗನಾಗಿ ತನ್ನ ಜ್ಞಾನ ಹಾಗೂ ವೃತ್ತಿ ಪ್ರಾವೀಣ್ಯತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಪ್ರತಿಯೊಬ್ಬ ಭಾವಿ ಶಿಕ್ಷಕರು ಇದರ ಬಗ್ಗೆ ಗಮನಹರಿಸಿ ತಮ್ಮ ಭಾಷೆ ಉತ್ತಮಪಡಿಸಿಕೊಂಡು ಬೋಧನಾ ಕಾರ್ಯದಲ್ಲಿ ಯಶಸ್ವಿಯಾಗುವಂತೆ ಹೇಳಿದರು. ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಮಾತನಾಡಿ, ಒಬ್ಬ ಸಮರ್ಥ ಶಿಕ್ಷಕ ಮಾತ್ರ ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ಎಂದರು.

ಬಿವಿಬಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ದೀಪಾ ರಾಗಾ ಮಾತನಾಡಿದರು. ಉಪನ್ಯಾಸಕರಾದ ಡಾ. ಸಂತೋಷಕುಮಾರ ಸಜ್ಜನ, ಶಿಲ್ಪಾ ಹಿಪ್ಪರಗಿ, ವೀಣಾ ಜಲಾದೆ, ರಾಜಕುಮಾರ ಸಿಂಧೆ, ಪಾಂಡುರಂಗ ಕುಂಬಾರ, ತ್ರಿವೇಣಿ ಪಾಟೀಲ್‌, ಸಿಬ್ಬಂದಿಗಳಾದ ಸಂಗೀತಾ ಪಾಟೀಲ್‌, ಅಶೋಕ ರೇವಣಿ, ಸುವರ್ಣಾ ಪಾಟೀಲ್‌ ಮತ್ತು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.