ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಯುಗಾದಿ ಅಮವಾಸ್ಯೆ ಹಿನ್ನಲೆಯಲ್ಲಿ ಪುಣ್ಯಸ್ನಾನ ಮಾಡುವ ಮಾಡುವ ಮೂಲಕ ಜನರು ಹೊಸ ವರ್ಷ ಸ್ವಾಗತಕ್ಕೆ ಅಣಿಯಾದರು. ಹೀಗಾಗಿ, ತಾಲೂಕಿನ ಮಿರಗಿ ಗ್ರಾಮದ ಬಳಿಯ ಭೀಮಾನದಿ ದಂಡೆಯಲ್ಲಿ ಧಾರ್ಮಿಕ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಯುಗಾದಿ ಹಬ್ಬದಂಗವಾಗಿ ನದಿ ದಂಡೆಯಲ್ಲಿರುವ ಪುರಾತನ ಸಂಗಮೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಈ ವೇಳೆ ಪಲ್ಲಕ್ಕಿಗಳ ಉತ್ಸವ ಮೂರ್ತಿಗಳನ್ನು ಶುದ್ದೀಕರಣ ಮಾಡಿ ಮೆರವಣಿಗೆ ಮೂಲಕ ತಮ್ಮೂರಿಗೆ ಪಾದಯಾತ್ರೆ ಬೆಳೆಸಿದರು.ಯುಗಾದಿ ಹಬ್ಬದ ನಿಮಿತ್ತ ಶನಿವಾರ ವಿವಿಧ ತಾಲೂಕಿನ ನಾನಾ ಕಡೆಯಿಂದ ಆಗಮಿಸಿದ್ದ ನೂರಾರು ಪಲ್ಲಕ್ಕಿಗಳು ಹಾಗೂ ದೇವರ ಉತ್ಸವ ಮೂರ್ತಿ, ಪರಿಕರಗಳ ಶುಧ್ಧೀಕರಣ ಕಾರ್ಯ ಭರದಿಂದ ನಡೆಯಿತು. ಜಿಲ್ಲೆಯ ಇಂಡಿ, ಸಿಂದಗಿ ಹಾಗೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿರಿಯಾಳ, ಬೊಸಗಾ, ಉಡಚಣ, ಹಟ್ಟಿ, ಬಳಗಾನೂರ, ಚಾಂದಕವಟೆ, ಹೂವಿನಹಳ್ಳಿ, ಗೋಳಸಾರ, ಲಾಳಸಂಗಿ, ಸಾತಲಗಾಂವ ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಪಲ್ಲಕ್ಕಿಗಳನ್ನು ಹೊತ್ತು ಇಲ್ಲವೇ ವಾಹನಗಳ ಮೂಲಕ ತಂದು ಸಂಪ್ರದಾಯದಂತೆ ಶುದ್ಧೀಕರಣ ಮಾಡಿದರು. ಪೂಜೆ ವೇಳೆ ಪಲ್ಲಕ್ಕಿಗಳು ಅರಿಶಿಣ ಭಂಡಾರದಲ್ಲಿ ಮಿಂದೆದ್ದವು.
ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ನೂರಾರು ದೇವರ ಉತ್ಸವ ಮೂರ್ತಿಗಳನ್ನು, ಪಲ್ಲಕ್ಕಿಗಳನ್ನು ಊರಿನ ಜನರು ಸೇರಿ ಡೊಳ್ಳು ಬಾರಿಸುತ್ತ ಮಿರಗಿ ಗ್ರಾಮದ ಬಳಿಯ ಭೀಮಾನದಿಗೆ ಆಗಮಿಸಿದ್ದರು. ನದಿಯ ಎರಡು ದಂಡೆಯ ಮೇಲೆ ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ, ಕೊಂಬು ಊದುವುದು ವಾದ್ಯಗಳ ಸದ್ದು ಮಾರ್ದನಿಸಿದವು.ಸಿಂದಗಿ ನಿಲಗಂಗಾ, ಬಳಗಾನೂರ ಕೆಂಚರಾಯ, ಭೀರದೇವರು, ಬಸವೇಶ್ವರ, ಅಮೋಘಸಿದ್ದೇಶ್ವರ, ಲಕ್ಷ್ಮಿ, ಮರಗಮ್ಮ ಹೀಗೆ ಅನೇಕ ದೇವರ ಮೂರ್ತಿಗಳನ್ನು ಮಿರಗಿ ಭೀಮಾನದಿಯಲ್ಲಿ ಸ್ನಾನ ಮಾಡಿಸುವುದು ವಾಡಿಕೆ. ಯುವಕ, ಯುವತಿಯರು, ಹಿರಿಯರು ಭೀಮೆಯಲ್ಲಿ ಪುಣ್ಯಸ್ನಾನ ಮಾಡಿ, ಮಡಿಯಲ್ಲಿಯೇ ದೇವರ ಮೂರ್ತಿಗಳನ್ನು ಶುಚಿಗೊಳಿಸಿ ನಂತರ ಪಲ್ಲಕ್ಕಿಗಳನ್ನು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸಿ ಪ್ರಸಾದ ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಯುಗಾದಿ ಅಮವಾಸ್ಯೆಗೆ ಆರಂಭಗೊಂಡು ಬಾದಮಿ ಅಮವಾಸ್ಯೆಗೆ ಚೌಡಮ್ಮ ಮೆರವಣಿಗೆ, ಮಹಾನವಮಿಗೆ ಅಂಬಾ ಭವಾನಿ ಜಾತ್ರೆ, ದೀಪಾವಳಿಗೆ ಗ್ರಾಮ ದೇವರಾದ ಜಟ್ಟಿಂಗರಾಯ, ಹಿರೋಡೇಶ್ವರ, ಬೀರಲಿಂಗೇಶ್ವರ, ದಾನಮ್ಮ, ಅಂಬಾ ಭವಾನಿ, ಯಲ್ಲಾಲಿಂಗ ಮಹಾರಾಜರ ಪಲ್ಲಕ್ಕಿಗಳ ಉತ್ಸವ, ಸಂಕ್ರಮಣಕ್ಕೆ ಸಂಗಮೇಶ್ವರ ಗ್ರಾಮ ದೇವರೊಳಗೊಂಡು ನಾದ, ಸಾತಲಗಾಂವ ಗ್ರಾಮಗಳ ಪಲ್ಲಕ್ಕಿಗಳ ಮೆರವಣಿಗೆ ಹೀಗೆ ವರ್ಷವಿಡಿ ಹಬ್ಬದ ವಾತಾವರಣ ನಡೆಯುತ್ತದೆ.