ಸಾರಾಂಶ
ದೇಶದಲ್ಲೇ ಪ್ರಥಮ ಪ್ರಯತ್ನ । ಯೋಜನೆ ಅನುಷ್ಠಾನಕ್ಕೆ ಪೈಲೆಟ್ ಜಿಲ್ಲೆಗಳಾಗಿ ಚಾಮರಾಜನಗರ, ಬೀದರ್ ಆಯ್ಕೆಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ನೀಡುವ ಉಪಾಹಾರ, ಊಟದ ವ್ಯವಸ್ಥೆಯನ್ನು ಸಾರ್ವಜನಿಕರು ಮುಕ್ತವಾಗಿ ವೀಕ್ಷಿಸಲು, ಪರಿಶೀಲಿಸಲು ಹಾಗೂ ಸಲಹೆ ನೀಡುವ ವಿನೂತನ ವ್ಯವಸ್ಥೆಗೆ ಶನಿವಾರ ಚಾಲನೆ ನೀಡಲಾಯಿತು.ಭಾರತ ದೇಶದಲ್ಲೇ ಪ್ರಥಮ ಪ್ರಯತ್ನವಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ವಿತರಿಸಲಾಗುವ ಊಟ ಉಪಹಾರದ ವ್ಯವಸ್ಥೆಯನ್ನು ಜಾಲತಾಣದ ಮೂಲಕ ಸಾರ್ವಜನಿಕರು ವೀಕ್ಷಿಸುವ ವಿನೂತನ ಯೋಜನೆ ಅನುಷ್ಠಾನಕ್ಕಾಗಿ ಪೈಲೆಟ್ ಜಿಲ್ಲೆಗಳಾಗಿ ಚಾಮರಾಜನಗರ ಹಾಗೂ ಬೀದರ್ ಆಯ್ಕೆಯಾಗಿದೆ.
ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳಲ್ಲಿ ಪ್ರತಿನಿತ್ಯ ನೀಡುತ್ತಿರುವ ತಿಂಡಿ, ಊಟದ ವಿವರಗಳನ್ನು ಎಕ್ಸ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗುವುದು. ಸಾರ್ವಜನಿಕವಾಗಿ ವೀಕ್ಷಿಸುವ ಅಧಿಕೃತ ಜಾಲತಾಣವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಶನಿವಾರ ಚಾಲನೆ ನೀಡಿದರು.ವಿದ್ಯಾರ್ಥಿನಿಲಯಗಳು, ವಸತಿ ಶಾಲೆಗಳಲ್ಲಿ ನೀಡುತ್ತಿರುವ ಬೆಳಗಿನ ಉಪಹಾರ, ಮಧ್ಯಾಹ್ನದ ಉಪಹಾರ ಹಾಗೂ ರಾತ್ರಿ ಊಟದ ಫೋಟೊಗಳನ್ನು ಅಪ್‌ಲೋಡ್ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪೋಷಕರು ಸೇರಿದಂತೆ ಸಾರ್ವಜನಿಕರು (https://foodswdok.in/cr) ವೀಕ್ಷಣೆ ಮಾಡಲು ಪಾರದರ್ಶಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಿಂಡಿ ಮತ್ತು ಊಟದ ಗುಣಮಟ್ಟ, ಹಾಸ್ಟೆಲ್ ಮತ್ತು ವಸತಿ ನಿಲಯಗಳ ಶುಚಿತ್ವ, ಬಯೋಮೆಟ್ರಿಕ್ ಹಾಜರಾತಿ ಎಲ್ಲವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಸರ್ಕಾರದಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಗುಣಮಟ್ಟದ ಊಟ ಮತ್ತು ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಕ್ರಮಗಳ ಪಾರದರ್ಶಕತೆ, ಜವಾಬ್ದಾರಿಯನ್ನು ಸಾರ್ವಜನಿಕರಿಗೆ ತಿಳಿಸುವ ನೂತನ ಪ್ರಯತ್ನವಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ೨೨ ವಸತಿ ಶಾಲೆಗಳು ಮತ್ತು ೫೬ ವಿದ್ಯಾರ್ಥಿನಿಲಯಗಳಿವೆ. ಸಂಬಂಧಪಟ್ಟ ವಾರ್ಡನ್‌ಗಳು ಪ್ರತಿನಿತ್ಯ ಊಟ ತಿಂಡಿ ನೀಡುತ್ತಿರುವ ಫೋಟೊಗಳನ್ನು ಅಪ್ ಲೋಡ್ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಪೋಷಕರು, ಪಾಲಕರು ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ವಿವರಗಳನ್ನು ನೋಡಬಹುದಾಗಿದೆ.ಸಾರ್ವಜನಿಕವಾಗಿ ಲಭ್ಯವಾಗುವಂತೆ ಇಲಾಖೆಯು ವೆಬ್‌ಸೈಟ್ ಅನ್ನು ಎಕ್ಸ್ ಖಾತೆ ರೂಪಿಸಿದೆ. ಈ ಜಾಲತಾಣದ ಮೂಲಕ ಪ್ರತಿನಿತ್ಯದ ವಿವರಗಳನ್ನು ಒಂದೇ ಜಾಲತಾಣದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯಿಂದ ಈ ಜಾಲತಾಣವನ್ನು ಮೇಲುಸ್ತುವಾರಿ ಮಾಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ಮತ್ತು ಹೊಸ ಉತ್ಕೃಷ್ಟತೆಯ ಪಾರದರ್ಶಕತೆಯನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ವಿಸ್ತರಿಸುವ ಪದ್ಧತಿ ಹೊಂದಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ಹಾಗೂ ವಸತಿ ನಿಲಯಗಳಲ್ಲಿ ನೀಡುತ್ತಿರುವ ಉಪಹಾರ ಊಟದ ವ್ಯವಸ್ಥೆಯನ್ನು ಮುಕ್ತವಾಗಿ ಸಾರ್ವಜನಿಕರು ಜಾಲತಾಣ ಎಕ್ಸ್ ಖಾತೆ ಮೂಲಕ ವೀಕ್ಷಿಸುವ ಪೈಲೆಟ್ ಯೋಜನೆಗೆ ಚಾಮರಾಜನಗರ ಮತ್ತು ಬೀದರ್ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಎರಡು ಜಿಲ್ಲೆಗಳ ಸಫಲತೆ ಯಶಸ್ಸಿನ ಆಧಾರದ ಮೇಲೆ ಇಡೀ ರಾಜ್ಯದ ಉಳಿದ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ಎಸ್. ಜಯಣ್ಣ, ಡಾ. ಪುಷ್ಪ ಅಮರನಾಥ್, ಪಿ. ಮರಿಸ್ವಾಮಿ, ಮಹಮ್ಮದ್ ಅಸ್ಗರ್ , ಮಹದೇವಣ್ಣ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೋನಾ ರೋತ್, ಡಾ. ಬಿ.ಟಿ. ಕವಿತಾ ಗೀತ ಹುಡೇದ, ಡಾ. ಸಂತೋಷ್ ಕುಮಾರ್, ಮುನಿರಾಜು ಇದ್ದರು.