ಸಾರಾಂಶ
- ಕೊಪ್ಪ ತಾಲೂಕಿನಲ್ಲಿದ್ದ 3 ಕಾಡಾನೆ- 1 ಮರಿಯಾನೆ ಹಿಂಡಿನಿಂದ ತಪ್ಪಿಸಿಕೊಂಡ ಬಂದ ಒಂಟಿ ಸಲಗಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಸೀತೂರು ಗ್ರಾಮಕ್ಕೆ ಬಂದಿದ್ದ ಒಂಟಿ ಸಲಗವನ್ನು ಓಡಿಸುವಾಗ ಆನೆ ತಿರುಗಿ ಬಿದ್ದು ಕಾಲಿನಿಂದ ತುಳಿದು ದಾಳಿ ನಡೆಸಿದ ಪರಿಣಾಮ ತಾಲೂಕು ಮಡಿವಾಳ ಮಾಚಿ ದೇವರ ಸಂಘದ ಉಪಾಧ್ಯಕ್ಷ ಹಾಗೂ ಸೀತೂರು ಗ್ರಾಮದ ಕೆರೆಗದ್ದೆ ಕೃಷಿಕ ಕೆ.ಎಸ್.ಉಮೇಶ ( 56) ಮೃತಪಟ್ಟ ಧಾರುಣ ಘಟನೆ ಶನಿವಾರ ಮದ್ಯಾಹ್ನ 2.45ರ ಸುಮಾರಿಗೆ ನಡೆದಿದೆ.ಘಟನೆ ವಿವರ: ಶುಕ್ರವಾರ ರಾತ್ರಿ ಕೆಸುವೆ ಕಾಡಿನ ಮಾರ್ಗದಿಂದ ಸೀತೂರು ಗ್ರಾಮಕ್ಕೆ ಬಂದ ಒಂಟಿ ಸಲಗ ಸೀತೂರು, ಅಜ್ರವಳ್ಳಿಯ ಕೆಲವು ತೋಟ, ಗದ್ದೆ ಮಾರ್ಗವಾಗಿ ಆನೆ ಮುಂದಕ್ಕೆ ಹೋಗಿದೆ. ಬೆಳಿಗ್ಗೆ ತೋಟಕ್ಕೆ ಹೋದಾಗ ರೈತರಿಗೆ ಒಂಟಿ ಸಲಗದ ಹೆಜ್ಜೆ ಗುರುತು, ಆನೆ ಲದ್ದಿ ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಮದ್ಯಾಹ್ನದ ಹೊತ್ತಿಗೆ ಸೀತೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ಈಶ್ವರ ನಾಯಕ್ ಹಾಗೂ ಗ್ರಾಮಸ್ಥರು ಒಟ್ಟಾಗಿ ಆನೆ ಹುಡುಕಾಟ ನಡೆಸಿದಾಗ ಸೀತೂರು ಸಹಕಾರ ಸಂಘದ ಹಿಂಭಾಗದ ಪ್ಲಾಂಟೇಷನ್ ನಲ್ಲಿ ಇರುವುದು ಗೊತ್ತಾಗಿದೆ. ನಂತರ ಉಪವಲಯ ಅರಣ್ಯಾಧಿಕಾರಿ ಈಶ್ವರನಾಯಕ್ ಹಾಗೂ ಗ್ರಾಮಸ್ಥರು ಒಟ್ಟಾಗಿ ಪ್ಲಾಂಟೇಷನ್ ನಿಂದ ಆನೆಯನ್ನು ಓಡಿಸುವಾಗ ಆನೆ ತಿರುಗಿ ಬಿದ್ದು ಹತ್ತಿರ ಸಿಕ್ಕಿದ ಉಮೇಶ ಅವರನ್ನು ತುಳಿದು ಸಾಯಿಸಿದೆ.ಗ್ರಾಮಸ್ಥರ ಆಕ್ರೋಶ:ಕಾಡಾನೆ ಕೆ.ಎಸ್.ಉಮೇಶ ಅವರನ್ನು ತುಳಿದು ಸಾಯಿಸಿದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆನೆಯನ್ನು ಓಡಿಸಲು ಆಗಮಿಸಿದ್ದ ಕೆಲವು ಅರಣ್ಯ ಸಿಬ್ಬಂದಿ ಜೀಪಿನಲ್ಲೇ ಕುಳಿತಿದ್ದು ಆನೆ ಓಡಿಸಲು ಬಂದಿರಲಿಲ್ಲ ಎಂದು ಆರೋಪಿಸಿದರು. ಕೆಲವು ಸಮಯ ಉದ್ರಿಕ್ತ ವಾತಾವರಣ ಉಂಟಾಯಿತು.ಕಳೆದ 2-3 ವರ್ಷದಿಂದ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಬಂದು ಫಸಲು ಹಾಳು ಮಾಡುತ್ತಿದೆ. ಗ್ರಾಮಸ್ಥರಲ್ಲಿ ಜೀವ ಭಯ ಉಂಟು ಮಾಡುತ್ತಿದೆ ಎಂದು ತಿಳಿಸಿದರೂ ಕಾಡಾನೆಯನ್ನು ಲಕ್ಕವಳ್ಳಿಯ ಭದ್ರಾ ಅಭಯಾರಣ್ಯಕ್ಕೆ ಓಡಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಮೃತ ಕೆ.ಎಸ್. ಉಮೇಶ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಸ್ಥಳಕ್ಕೆ ಕೊಪ್ಪ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್ ಬೇಟಿ ನೀಡಿದ್ದರು.ಕೊಪ್ಪ ತಾಲೂಕಿನಲ್ಲಿದ್ದ ಕಾಡಾನೆ ಹಿಂಡು:ಸೀತೂರು ಗ್ರಾಮಕ್ಕೆ ಆಗಮಿಸಿದ ಒಂಟಿ ಸಲಗ ಕಳೆದ 3 ದಿನದ ಹಿಂದೆ ಕೊಪ್ಪ ತಾಲೂಕಿನ ಹಂದಿಗೋಡು ಸಮೀಪದ ರೈತರ ಜಮೀನಿಗೆ ಬಂದಿತ್ತು. ನಂತರ ಕೊಪ್ಪದ ಗುರ್ಜರ್ ಎಸ್ಟೇಟಿನ ಮೂಲಕ ಬಲಗಾರು ಎಂಬಲ್ಲಿಗೆ ಬಂದು ನಂತರ ಕೆಸುವೆ ಕಾಡಿಗೆ ಬಂದಿತ್ತು. ಸೀತೂರು ಗ್ರಾಮಕ್ಕೆ ಹೊಂದಿಕೊಂಡೇ ಇರುವ ಕೊಪ್ಪ ತಾಲೂಕಿನ ಕೆಸುವೆ ಕಾಡಿನಲ್ಲಿ 2 ದಿನದಿಂದ ಬೀಡು ಬಿಟ್ಟಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.ಗ್ರಾಮಸ್ಥರ ಪ್ರಕಾರ ಕೆಸುವೆ ಕಾಡಿನಲ್ಲಿ 3 ಆನೆ ಹಾಗೂ ಒಂದು ಮರಿಯಾನೆ ಇತ್ತು ಎನ್ನಲಾಗಿದೆ. ಆದರೆ, ಆ ಗುಂಪಿನಿಂದ ಒಂದು ಗಂಡಾನೆ ತಪ್ಪಿಸಿಕೊಂಡು ಸೀತೂರು ಗ್ರಾಮಕ್ಕೆ ಬಂದು ಒಬ್ಬರನ್ನು ಬಲಿ ಪಡೆದಿದೆ. ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆಯಿಂದ ಇದೇ ಮೊದಲ ಬಾರಿಗೆ ಒಬ್ಬರು ಮೃತಪಟ್ಟಿದ್ದು ಗ್ರಾಮಸ್ಥರಲ್ಲಿ ಗಾಬರಿ ಮೂಡಿಸಿದೆ.